Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 12 June 2023

10ನೇ ತರಗತಿ ಸಿರಿ ಕನ್ನಡ ಪುಸ್ತಕದ ನಿಜವಾದ ಆದರ್ಶ ಪುರುಷ ಯಾರಾಗಬೇಕು? ಘಟಕದ ಸಂಪೂರ್ಣ ನೋಟ್ಸ್ ಮತ್ತು ಪ್ರಶ್ನೋತ್ತರಗಳು

10ನೇ ತರಗತಿ ಸಿರಿ ಕನ್ನಡ ಪುಸ್ತಕದ ನಿಜವಾದ ಆದರ್ಶ ಪುರುಷ ಯಾರಾಗಬೇಕು? ಘಟಕದ ಸಂಪೂರ್ಣ ನೋಟ್ಸ್ ಮತ್ತು ಪ್ರಶ್ನೋತ್ತರಗಳು



ಕವಿ ಪರಿಚಯ: ಕೇಶವ ಬಲಿರಾಮ ಹೆಗಡೇವಾರ:

ಕೇಶವ ಬಲಿರಾಮ ಹೆಗಡೇವಾರರು ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದ ಸಂಸ್ಥಾಪಕರು, ಇವರು 1889 ರ ಏಪ್ರಿಲ್ 01 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು ಹಾಗೂ ವಿನಾಯಕ ದಾಮೋದರ ಸಾವರ್ಕರರ ಚಿಂತನೆಗಳಿಂದ ಪ್ರಭಾವಿತರಾದರು.

ಕಲಕತ್ತೆಯಲ್ಲಿ ವೈದ್ಯಕೀಯ ಪದವಿ ಪಡೆದು ವೈದ್ಯರಾಗಿ ಜನಸೇವೆ ಮಾಡಿದರು. ತಿಲಕರ ಸ್ವರಾಜ್ಯ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು ಹಾಗೂ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದರು. ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕಾರಣ ಮತ್ತೆ 9 ತಿಂಗಳ ಅವಧಿಗೆ ಅವರು ಬ್ರಿಟಿಷ್ ಸರಕಾರದಲ್ಲಿ ಕಾರಾಗೃಹವಾಸ ಅನುಭವಿಸಬೇಕಾಯಿತು. ಭಾರತದ ಸ್ವಾತಂತ್ರ್ಯವು ಅರ್ಥಪೂರ್ಣವಾಗಬೇಕಾದರೆ ಭಾರತೀಯರು ತಮ್ಮ ನೆಲದ ಸಂಸ್ಕೃತಿ, ಸತ್ವಗಳನ್ನು ಆರಿತುಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಅವರು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದು ಸರಿಸುಮಾರು 60 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ಪಾಠವನ್ನು ಅವರ “ಪ್ರೇರಣಾ” ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ.


ನಿಜವಾದ ಆದರ್ಶ ಪುರುಷ ಯಾರಾಗಬೇಕು? - ಆಶಯ ಭಾವ

ಆದರ್ಶ  ಎಂಬ  ಸಂಸ್ಕೃತ  ಶಬ್ದದ  ಮೂಲಾರ್ಥ  ಕನ್ನಡಿ  ಎಂದು.  ಕನ್ನಡಿಯ  ಎದುರು  ನಿಂತಾಗ  ನಾವು ನಮ್ಮನ್ನು  ಸರಿಪಡಿಸಿಕೊಳ್ಳುತ್ತೇವೆ,  ಸಿಂಗರಿಸಿಕೊಳ್ಳುತ್ತೇವೆ.  ಕನ್ನಡಿಯು  ನಮಗೆ  ಹೇಗಿರಬೇಕೆಂಬುದನ್ನು ಬಾಯ್ಬಿಟ್ಟು  ಹೇಳದಿದ್ದರೂ  ಅದರ  ಎದುರಿನಲ್ಲಿ  ನಾವು  ನಮ್ಮನ್ನು  ಸರಿಪಡಿಸಿಕೊಳ್ಳಲು  ಪ್ರಾರಂಭಿಸುತ್ತೇವೆ. ಹಾಗೆಯೇ  ಆದರ್ಶ  ವ್ಯಕ್ತಿ  ಎಂದರೆ  ಯಾರನ್ನು  ನೋಡಿ  ನಾವು  ನಮ್ಮ  ಬದುಕನ್ನು,  ವ್ಯಕ್ತಿತ್ವವನ್ನು, ವರ್ತನೆಗಳನ್ನು ಪರಿಷ್ಕರಿಸಿಕೊಳ್ಳಬಹುದೋ ಅಂಥ ವ್ಯಕ್ತಿ. ಅವರು ನಮ್ಮನ್ನುದ್ದೇಶಿಸಿ ಏನನ್ನೂ ಹೇಳದಿದ್ದರೂ ಅವರ  ವ್ಯಕ್ತಿತ್ವವೇ  ನಮಗೆ  ನಮ್ಮನ್ನು  ಸರಿಪಡಿಸಿಕೊಳ್ಳಲು  ಸಹಾಯ  ಮಾಡುತ್ತದೆ. ಅವರು  ನಮಗೆ ಪರೋಕ್ಷ  ಮಾರ್ಗದರ್ಶಕರಾಗುತ್ತಾರೆ.  ನಾವು  ಪ್ರತಿಯೊಬ್ಬರೂ  ಅಂಥದೊಂದು  ಆದರ್ಶವನ್ನು  ಜೀವನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದರೆ ಅದು ನಮ್ಮ ಬದುಕನ್ನು ರೂಪಿಸುತ್ತದೆ. ನಾವು ಸರಿದಾರಿಯಲ್ಲಿ ನಡೆಯುವಂತೆ  ನಮ್ಮನ್ನು ಪ್ರೇರೇಪಿಸುತ್ತದೆ.  ನಮ್ಮ  ಜೀವನಕ್ಕೆ  ಒಂದು  ಗುರಿಯನ್ನು  ಕೊಡುತ್ತದೆ.  ಅದರಿಂದ ನಮ್ಮ  ಚಿಂತನೆಯಲ್ಲಿ  ಸ್ಪಷ್ಟತೆ  ಮೂಡುತ್ತದೆ.  ಭವಿಷ್ಯದ  ಗೊಂದಲಗಳೆಲ್ಲ  ನಿವಾರಣೆಯಾಗಿ  ನಮಗೆ  ಅತ್ಯಂತ ಖಚಿತವಾದ ದಾರಿಯು ಗೋಚರಿಸುತ್ತದೆ. ಹಾಗಾಗಿ ಆದರ್ಶವು ನಮ್ಮನ್ನು ಸ್ಪಷ್ಟ ದಿಕ್ಕಿನಲ್ಲಿ ಮುನ್ನಡೆಸುತ್ತದೆ. ಈ  ಆದರ್ಶವು  ಓರ್ವ  ವ್ಯಕ್ತಿ  ಆಗಿರಬೇಕೋ  ಅಥವಾ  ಒಂದು  ತತ್ತ್ವವೋ  ಎಂಬುದನ್ನು  ಪ್ರಸ್ತುತ  ಪಾಠವು ಚರ್ಚಿಸುತ್ತದೆ.


ನಿಜವಾದ ಆದರ್ಶ ಪುರುಷ ಯಾರಾಗಬೇಕು?: ಪದಗಳ ಅರ್ಥ

  • ಆದರ್ಶ - ಮಾದರಿ
  • ತತ್ತ್ವ - ಸಿದ್ಧಾಂತ, ಸೂತ್ರ, ಮೌಲ್ಯ
  • ನಿರ್ಗುಣ - ಯಾವುದೇ ಗುಣಗಳನ್ನು ಆರೋಪಿಸಲಾಗದ, ಗುಣಾತೀತವಾದ
  • ನಿರಾಕಾರ - ಯಾವುದೇ ಆಕಾರವನ್ನು ಆರೋಪಿಸಲಾಗದ, ಎಲ್ಲ ಆಕಾರಗಳಿಗೆ ಅತೀತವಾದ
  • ಪ್ರಮಾದಾತೀತ - ಎಲ್ಲ ತಪ್ಪು, ಕಳಂಕ, ಅಪರಾಧಗಳಿಗೆ ಅತೀತವಾದ
  • ಮೋಕ್ಷ - ಜೀವನದ ಕೊನೆಯ ಸ್ಥಿತಿ, ಮುಕ್ತಿ
  • ಪುಣ್ಯಸಂಚಯ - ಪುಣ್ಯವನ್ನು ಒಟ್ಟುಗೂಡಿಸುವುದು
  • ವಿಭೂತಿ ಪುರುಷ - ಮಹಾನ್ ವ್ಯಕ್ತಿ, ಸಾಧಕ
  • ಚೈತನ್ಯ - ಶಕ್ತಿಅಕಲಂಕ - ಕಳಂಕವಿಲ್ಲದ, ದೋಷರಹಿತ
  • ನಿರ್ಭಿಡೆ - ಭಯವಿಲ್ಲದ


ನಿಜವಾದ ಆದರ್ಶ ಪುರುಷ ಯಾರಾಗಬೇಕು?: ಅಭ್ಯಾಸ

 

ಅ)  ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.

1. ಯಾವುದು ಎಂದೆಂದೂ ನಮ್ಮ ಆದರ್ಶವಾಗಿರಬೇಕು?

2. ಯಾವ ವ್ಯಕ್ತಿ ನಮಗೆ ಆದರ್ಶವಾಗಬಲ್ಲನು?

3. ಗುರುಪೂರ್ಣಿಮಾ ದಿನದಂದು ಲೇಖಕರು ಯಾರನ್ನು ಪೂಜಿಸುತ್ತಾರೆ?

4. ತಿಲಕರನ್ನು ಯಾವ ರೀತಿ ಚಿತ್ರಿಸಲಾಗಿತ್ತು?

5. ಶಿವಚರಿತ್ರೆಯಲ್ಲಿ ಯಾವ ಉಲ್ಲೇಖ ಮಾಡಲಾಗಿದೆ?


ಆ)  ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಜನರು ಮೂರ್ತಿಪೂಜೆ ಮಾಡಲು ಕಾರಣವೇನು?

2. ಯಾವ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು?

3. ಮೊಗ್ಗನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?

4. ಧ್ವಜವನ್ನೇ ನಮ್ಮ ಗುರುವೆಂದು ಸ್ವೀಕರಿಸಿದ್ದೇವೆ ಎಂದು ಲೇಖಕರು ಹೇಳಿದ್ದಾರೇಕೆ?

5. ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?


ಇ)  ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಆದರ್ಶ ವ್ಯಕ್ತಿ ದೋಷರಹಿತನಾಗಿರಬೇಕಾದ್ದು ಮುಖ್ಯ, ಏಕೆ?

2. ಶ್ರೀಕೃಷ್ಣನನ್ನು ಕೇವಲ ಪುಣ್ಯಸಂಚಯಕ್ಕಾಗಿ ಪೂಜಿಸುವುದು ಸರಿಯಲ್ಲ - ಲೇಖಕರು ಹೀಗೆ ಹೇಳಲು ಕಾರಣವೇನು?

3. ಯಾವ ಕಲೆಯನ್ನು ನಾವು ಸೊಗಸಾಗಿ ಸಾಧಿಸಿದ್ದೇವೆಂದು ಲೇಖಕರು ನಗೆಯಾಡುತ್ತಾರೆ?

4. ಪುಣ್ಯಸಂಚಯ  ಹಾಗೂ  ಮೋಕ್ಷಪ್ರಾಪ್ತಿಗಾಗಿ  ಗ್ರಂಥಪಠಣ  ಮಾಡುವದರ  ಬಗ್ಗೆ  ಲೇಖಕರ ಅಭಿಪ್ರಾಯವೇನು?

5. ತಿಲಕರು  ಮತ್ತು  ಶಿವಾಜಿಯವರನ್ನು  ಜನ  ಹೇಗೆ  ಸ್ವೀಕರಿಸಿದ್ದಾರೆ?  ಈ  ಬಗ್ಗೆ  ಲೇಖಕರು  ಯಾವ ಅಭಿಪ್ರಾಯ ತಳೆದಿದ್ದಾರೆ?


ಈ) ಈ ಕೆಳಗಿನ ವಾಕ್ಯಗಳ ಅರ್ಥಸ್ವಾರಸ್ಯವನ್ನು ಆರೇಳು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ.

1. ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ?

2. ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು.


ಉ) ಈ ವಿಷಯದ ಮೇಲೆ ನಿಮ್ಮ ತರಗತಿಯಲ್ಲಿ ಚರ್ಚೆ/ಸಂವಾದ ನಡೆಸಿ:

1. ಯಾವುದು ಆದರ್ಶವಾಗಬೇಕು - ತತ್ತ್ವ ಅಥವಾ ವ್ಯಕ್ತಿ?

2. ವರ್ತಮಾನದಲ್ಲಿ ಯಾರನ್ನು ಆದರ್ಶ ಪುರುಷರಾಗಿ ಸ್ವೀಕರಿಸಬಹುದು? ಯಾಕೆ?

3. ಆದರ್ಶ ವ್ಯಕ್ತಿಯಲ್ಲಿ ಏನೇನು ಗುಣಗಳು ಇರಬೇಕು?

4. ಮನುಷ್ಯರನ್ನು ದೇವರನ್ನಾಗಿ ಮಾಡುವುದು ಸರಿಯೇ ತಪ್ಪೆ?

5. ಮನುಷ್ಯರು ಮೂರ್ತಿಪೂಜೆಯನ್ನು ಯಾಕೆ ಮಾಡುತ್ತಾರೆ?


ನಿಜವಾದ ಆದರ್ಶ ಪುರುಷ ಯಾರಾಗಬೇಕು?: ಭಾಷೆಯ ಸೊಬಗು

ಅ ಮತ್ತು ಹ ಎಂಬ ಅಕ್ಷರಗಳ ಉಚ್ಚಾರ ಒಂದೇ ಬಗೆಯಾಗಿ ಕೇಳಿಸುತ್ತದಾದರೂ ಅವುಗಳ ಮಧ್ಯೆ ಸ್ಪಷ್ಟವಾದ ವ್ಯತ್ಯಾಸವಿದೆ.

  • ಅರಿವೆ - ಬಟ್ಟೆ
  • ಹರಿವೆ - ಒಂದು ಬಗೆಯ ಸೊಪ್ಪು

(1) ಅವನಿಗೆ ಅರಿವೆ ಹೊಲಿಸಿಕೊಳ್ಳುವುದಕ್ಕೆ ಕಾಸು ಕೊಡು.

(2) ಹರಿವೆ ಸೊಪ್ಪು ಕೊಳ್ಳುವುದಕ್ಕೆಂದು ಅವನನ್ನು ಸಂತೆಗೆ ಕಳಿಸು.

  • ಏರಿಕೆ - ಹೆಚ್ಚಳ
  • ಹೇರಿಕೆ - ಒಂದರ ಮೇಲೆ ಇನ್ನೊಂದನ್ನು ಹಾಕು

(3) ಪೆಟ್ರೋಲೆ ಬೆಲೆ ಏರಿಕೆಯಾದರೆ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಹೆಚ್ಚುತ್ತವೆ.

(4) ಒಂದು ಸಂಸ್ಕೃತಿಯ ಮೇಲೆ ಇನ್ನೊಂದು ಸಂಸ್ಕೃತಿಯ ಬಲವಂತದ ಹೇರಿಕೆ ಸಲ್ಲದು.

ಇಂಥ ಇನ್ನಷ್ಟು ಶಬ್ದಗಳನ್ನು ಪಟ್ಟಿ ಮಾಡಿ.


ನಿಜವಾದ ಆದರ್ಶ ಪುರುಷ ಯಾರಾಗಬೇಕು?: ಸೈದ್ಧಾಂತಿಕ ಭಾಷಾಭ್ಯಾಸ

ಸಮಾಸಗಳು:

ಈ ವಾಕ್ಯಗಳನ್ನು ಗಮನಿಸಿ:

1.  ಅಲ್ಲಿ ಹಿರಿದಾದ ತೊರೆಯು ಹರಿಯುತ್ತಿತ್ತು.

2.  ಬಸವನು ಕಾಲಿನ ಬಳೆಗಳನ್ನು ತಂದನು.

3.  ಕೊಡಗಿನ ಜನರು ಕೆರೆಗಳ, ಕಟ್ಟೆಗಳ, ಬಾವಿಗಳ ಸೌಲಭ್ಯವನ್ನು ಪಡೆದಿದ್ದಾರೆ.

ಒಂದನೆಯ ವಾಕ್ಯದಲ್ಲಿರುವ ಹಿರಿದಾದ, ತೊರೆ ಎಂಬ ಪದಗಳನ್ನು ಹೆದ್ದೊರೆ ಎಂದೂ ಎರಡನೆಯ ವಾಕ್ಯದಲ್ಲಿರುವ ಕಾಲಿನ ಬಳೆಗಳನ್ನು ಎಂಬ ಪದಗಳನ್ನು ಕಾಲುಬಳೆ ಎಂಬುದಾಗಿಯೂ ಮೂರನೆಯ ವಾಕ್ಯದ ಕೆರೆಗಳ, ಕಟ್ಟೆಗಳ, ಬಾವಿಗಳ ಎಂಬ ಪದಗಳನ್ನು ಕೆರೆಕಟ್ಟೆಬಾವಿಗಳ ಎಂಬುದಾಗಿಯೂ ಪ್ರಯೋಗಿಸಲಾಗಿದೆ. ಹೀಗೆ__

ಎರಡು ಅಥವಾ ಅನೇಕ ಪದಗಳನ್ನು ಅರ್ಥಕ್ಕನುಸಾರವಾಗಿ ಸೇರಿಸಿ (ಅರ್ಥಕ್ಕೆ ಲೋಪ ಬಾರದ ರೀತಿಯಲ್ಲಿ) ಒಂದೇ ಪದವನ್ನಾಗಿ ಮಾಡುವ ಪ್ರಕ್ರಿಯೆಯನ್ನು ಸಮಾಸ ರಚನೆ ಎಂದು ಕರೆಯಲಾಗುವುದು. ಹೀಗೆ ರಚನೆಗೊಳ್ಳುವ ಸಮಸ್ತಪದ ಅಥವಾ ಸಮಾಸದ ಮೊದಲ ಪದವು ಪೂರ್ವಪದವೆಂತಲೂ ಕೊನೆಯ ಪದವು ಉತ್ತರ ಪದವೆಂತಲೂ ಕರೆಯಲ್ಪಡುತ್ತದೆ. ಸಮಸ್ತಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹವಾಕ್ಯ ಎಂದು ಕರೆಯುತ್ತಾರೆ.

ಸಮಾಸ ರಚನೆ ಮಾಡುವಾಗ ಸಂಸ್ಕೃತ ಪದಕ್ಕೆ ಸಂಸ್ಕೃತ ಪದವನ್ನೇ ಸೇರಿಸಬೇಕು ಹೊರತು ಸಂಸ್ಕೃತಕ್ಕೆ ಕನ್ನಡ  ಅಥವಾ  ಕನ್ನಡಕ್ಕೆ  ಸಂಸ್ಕೃತ  ಪದಗಳನ್ನು  ಸೇರಿಸಬಾರದು.  ಹಾಗೆ  ಸೇರಿಸಿದರೆ  ಅದು  ಅರಿಸಮಾಸ ಎನಿಸುತ್ತದೆ.  ಆದರೆ  ಪೂರ್ವದ  ಕವಿಗಳ  ಪ್ರಯೋಗಗಳಲ್ಲಿ,  ಬಿರುದಾವಳಿಗಳಲ್ಲಿ,  ಗಮಕ  ಮತ್ತು  ಕ್ರಿಯಾ ಸಮಾಸಗಳಲ್ಲಿ ಮಾಡಿದ್ದರೆ ದೋಷವಿಲ್ಲ.

ಸಮಾಸಗಳಲ್ಲಿ ಪೂರ್ವಪದ ಅರ್ಥಪ್ರಧಾನ ಸಮಾಸ. ಉತ್ತರಪದ ಅರ್ಥಪ್ರಧಾನ ಸಮಾಸ, ಉಭಯಪದ ಅರ್ಥಪ್ರಧಾನ ಸಮಾಸ, ಅನ್ಯಪದ ಅರ್ಥಪ್ರಧಾನ ಸಮಾಸ ಎಂಬ ಪ್ರಭೇದಗಳಿವೆ. ಈ ಪ್ರಭೇದಗಳ ಆಧಾರದಿಂದ ಕನ್ನಡದಲ್ಲಿ  ಒಟ್ಟು  ಎಂಟು  ವಿಧದ  ಸಮಾಸಗಳು  ಬಳಕೆಯಲ್ಲಿವೆ.  ಇವುಗಳನ್ನು  ತತ್ಪುರುಷ,  ಕರ್ಮಧಾರಯ, ದ್ವಿಗು, ಬಹುವ್ರೀಹಿ, ಅಂಶಿ, ದ್ವಂದ್ವ, ಕ್ರಿಯಾ ಮತ್ತು ಗಮಕ ಎಂದು ಹೆಸರಿಸಲಾಗಿದೆ.

ಎಂಟೂ ಸಮಾಸಗಳನ್ನು ಹಿಂದಿನ ತರಗತಿಗಳಲ್ಲಿ ವಿವರವಾಗಿ ಅಧ್ಯಯನ ಮಾಡಲಾಗಿದೆ. ಹಾಗಾಗಿ ಇಲ್ಲಿ ಉದಾಹರಣೆಗಳೊಂದಿಗೆ ನೆನಪಿಸಿಕೊಳ್ಳೋಣ.

ತತ್ಪುರುಷ ಸಮಾಸ : 

ಬೆಟ್ಟದ + ತಾವರೆ = ಬೆಟ್ಟದಾವರೆ       

ತಲೆಯಲ್ಲಿ + ನೋವು = ತಲೆನೋವು

ಕರ್ಮಧಾರಯ ಸಮಾಸ   :    

ಇನಿದು + ಮಾವು = ಇಮ್ಮಾವು     

ಮೆಲ್ಲಿತು + ಮಾತು = ಮೆಲ್ವಾತು       

ಹೊಸದು + ಕನ್ನಡ = ಹೊಸಗನ್ನಡ

ದ್ವಿಗುಸಮಾಸ   :    

ಮೂರು + ಗಾವುದ = ಮೂಗಾವುದ       

ಮೂರು + ಕಣ್ಣು = ಮುಕ್ಕಣ್ಣು       

ಸಪ್ತಗಳಾದ + ಸ್ವರಗಳು = ಸಪ್ತಸ್ವರಗಳು

ಬಹುವ್ರೀಹಿಸಮಾಸ   :  

ಹಣೆಯಲ್ಲಿ ಕಣ್ಣು ಉಳ್ಳವನು ಆವನೋ ಅವನು - ಹಣೆಗಣ್ಣ - ಶಿವ.     

ಮೂರು ಕಣ್ಣು ಉಳ್ಳವನು ಆವನೋ ಅವನು - ಮುಕ್ಕಣ್ಣ - ಶಿವ.     

ಚಕ್ರವು ಪಾಣಿಯಲ್ಲಿ ಆವನಿಗೋ ಅವನು - ಚಕ್ರಪಾಣಿ - ವಿಷ್ಣು

ಅಂಶಿಸಮಾಸ :    

ಕೈಯ + ಅಡಿ = ಅಂಗೈ    

ತಲೆಯ + ಹಿಂದು = ಹಿಂದಲೆ     

ಕಣ್ಣ + ಕಡೆ = ಕಡೆಗಣ್ಣು

ದ್ವಂದ್ವಸಮಾಸ :    

ಗಿರಿಯೂ + ವನವೂ + ದುರ್ಗವೂ = ಗಿರಿವನದುರ್ಗಗಳು     

ಕರಿಯೂ + ತುರಗವೂ + ರಥವೂ = ಕರಿತುರಗರಥ

ಕ್ರಿಯಾಸಮಾಸ :    

ಮೈಯನ್ನು + ಮುಚ್ಚು = ಮೈಮುಚ್ಚು     

ಕಣ್ಣಂ + ತೆರೆ = ಕಣ್ದೆರೆ    ಕಣ್ಣಿನಿಂದ + ಕೆಡು = ಕಂಗೆಡು

ಗಮಕ ಸಮಾಸ :    

ಅದು + ಕಲ್ಲು = ಆಕಲ್ಲು    

ಇದು + ಬೆಕ್ಕು = ಈಬೆಕ್ಕು    

ನೆಯ್ದುದು + ವಸ್ತ್ರ = ನೆಯ್ದವಸ್ತ್ರ


ನಿಜವಾದ ಆದರ್ಶ ಪುರುಷ ಯಾರಾಗಬೇಕು?: ಭಾಷಾ ಚಟುವಟಿಕೆ

 

1. ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ರಚಿಸಿರಿ.

1. ಗ್ರಾಮಸ್ವರಾಜ್ಯ  

2. ತ್ಯಾಜ್ಯವಸ್ತು ನಿರ್ವಹಣೆ   


ಪೂರಕ ಓದು

ಕೇಶವ ಬಲಿರಾಮ ಹೆಡಗೇವಾರರ ಜೀವನಚರಿತ್ರೆಯನ್ನು ಓದಿರಿ. (ಭಾರತ - ಭಾರತಿ)   ಹೆಡಗೇವಾರರ ಚಿಂತನೆಗಳ ಕೃತಿ ಪ್ರೇರಣಾ ಓದಿರಿ. ಆದರ್ಶ ಪುರುಷರ ಜೀವನಚರಿತ್ರೆಗಳನ್ನು ಓದಿರಿ


ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ ,


1. ತಿಲಕರನ್ನು ಯಾವ ರೀತಿ ಚಿತ್ರಿಸಲಾಗಿತ್ತು?

ಉತ್ತರ : ತಿಲಕರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದ್ಯಗಳನ್ನು ಕೊಡಲಾಗಿತ್ತು.

 

2 . ಶಿವಚರಿತ್ರೆಯಲ್ಲಿ ಯಾವ ಉಲ್ಲೇಖ ಮಾಡಲಾಗಿದೆ?

ಉತ್ತರ : ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಉಲ್ಲೇಖ ಮಾಡಲಾಗಿದೆ.


3. ಯಾವುದು ಎಂದೆಂದೂ ನಮ್ಮ ಆದರ್ಶವಾಗಿರಬೇಕು?

ಉತ್ತರ : ತತ್ತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು


4. ಯಾವ ವ್ಯಕ್ತಿ ನಮಗೆ ಆದರ್ಶವಾಗಬಲ್ಲನು?

ಉತ್ತರ : ನಮ್ಮಿಂದ ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು.


5. ಗುರುಪೂರ್ಣಿಮಾ ದಿನದಂದು ಲೇಖಕರು ಯಾರನ್ನು ಪೂಜಿಸುತ್ತಾರೆ?

ಉತ್ತರ : ಗುರುಪೂರ್ಣಿಮಾ ದಿನದಂದು ಲೇಖಕರು ಧ್ವಜವನ್ನು ಪೂಜಿಸುತ್ತಾರೆ.


ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.


1. ಮೊಗ್ಗನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?

ಉತ್ತರ : ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಮಷಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಆ ಕ್ರಿಮಿಕೀಟಗಳಿಂದಾಗಿ ಮುಂದೆ ಅವು ಪೂರ್ಣವಾಗಿ ಅರಳಲಾರವು.


2. ಧ್ವಜವನ್ನೇ ನಮ್ಮ ಗುರುವೆಂದು ಸ್ವೀಕರಿಸಿದ್ದೇವೆ ಎಂದು ಲೇಖಕರು ಹೇಳಿದ್ದಾರೇಕೆ?

ಉತ್ತರ : 'ಕೇವಲ ತಮ್ಮ ಒಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು. ಅದನ್ನು ಧ್ವಜವು ಸಾಂಕೇತಿಸುತ್ತದೆ. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ , ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆಯೋ , ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ , ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ. ಗುರುಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತೇವೆ. 'ಎಂದು ಲೇಖಕರು ಹೇಳಿದ್ದಾರೆ.


3. ಜನರು ಮೂರ್ತಿಪೂಜೆ ಮಾಡಲು ಕಾರಣವೇನು?

ಉತ್ತರ : ಅದೃಶ್ಯ , ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಆ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ. ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದ ಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ಸಾಧನವಾಗಿದೆ.


4. ಯಾವ ವ್ಯಕ್ತಿಯನ್ನು ನಾವು ಆದರ್ಶವಾಗಿ ಸ್ವೀಕರಿಸಬೇಕು?

ಉತ್ತರ : ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಯಾವಾಗಲೂ ತಪ್ಪು ಮಾಡದವನೆಂದು ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಕಳಂಕವಿಲ್ಲದಂತಿರುವುದೋ ನಿಸ್ಸಂಕೋಚವಾಗಿ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ , ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು.


5. ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಇರುವ ತೊಡಕುಗಳೇನು?

ಉತ್ತರ : ವ್ಯಕ್ತಿಗಳನ್ನು ಆದರ್ಶವಾಗಿ ಸ್ವೀಕರಿಸಲು ಕೆಲವು ತೊಡಕುಗಳಿವೆ. ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ , ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು , ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ.


ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.


1. ಯಾವ ಕಲೆಯನ್ನು ನಾವು ಸೊಗಸಾಗಿ ಸಾಧಿಸಿದ್ದೇವೆಂದು ಲೇಖಕರು ನಗೆಯಾಡುತ್ತಾರೆ?

ಉತ್ತರ : 'ಧಾರ್ಮಿಕ ಸಾಹಿತ್ಯದಲ್ಲಿ ಒಂದಕ್ಕಿಂತ ಒಂದು ಶ್ರೇಷ್ಠವಾದ ಗ್ರಂಥಗಳಿವೆ. ನಮ್ಮ ಗತ ಇತಿಹಾಸವಾದರೂ ಅಷ್ಟೇ , ಅತ್ಯಂತ ಮಹತ್ವಪೂರ್ಣವಾಗಿದೆ , ವೀರರಸಪ್ರಧಾನವಾಗಿದೆ , ಹಾಗೆಯೇ ಸ್ಫೂರ್ತಿದಾಯಕವೂ ಆಗಿದೆ. ಆದರೆ ನಾವೆಂದೂ ಅವುಗಳ ಬಗ್ಗೆ ಯೋಗ್ಯ ದೃಷ್ಟಿಯಿಂದ ಯೋಚಿಸಲು ಕಲಿತಿಲ್ಲ. ಎಲ್ಲಿಯಾದರೂ ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು , ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೇವತ್ವವನ್ನು ಹೊರಿಸಲು ಸ್ವಲ್ಪವೂ ತಡಮಾಡುವುದಿಲ್ಲ. ಉದಾಹರಣೆಗೆ : ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ. “ ಶಿವಚರಿತ್ತೆ ”ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ. ಒಂದುಕಡೆ ಲೋಕಮಾನ್ಯ ತಿಲಕರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದಗಳನ್ನು ಕೊಡಲಾಗಿತ್ತು. ಮಹಾನ್ ಪುರುಷರು ಕಣ್ಣಿಗೆ ಬೀಳುವುದೇ ತಡ , ಅವರಾಗಲೇ ದೇವಸ್ಥಾನ ಸೇರಿದಂತೆಯೇ. ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ ; ಆದರೆ ಅವರ ಗುಣಗಳನ್ನು ಅನುಸರಿಸುವ ಮಾತು ಮಾತ್ರ ಕೇಳುವುದಿಲ್ಲ. ಒಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಬುದ್ಧಿಪೂರ್ವಕವಾಗಿ ದೂರ ಸರಿಸುವಂಥ ಈ ಅದ್ಭುತ ಕಲೆಯನ್ನು ನಾವು ಸೊಗಸಾಗಿ ಸಾಧಿಸಿಕೊಂಡಿದ್ದೇವೆ 'ಎಂದು ಲೇಖಕರು ಹೇಳಿದ್ದಾರೆ.


2. ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುವದರ ಬಗ್ಗೆ ಲೇಖಕರ ಅಭಿಪ್ರಾಯವೇನು?

ಉತ್ತರ : ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ , ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು , ರಾಮಾಯಣ , ಮಹಾಭಾರತ , ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ. ಕೇವಲ ಮಣ್ಯಸಂಚಯಕ್ಕಾಗಿ ಎಂಥ ಸಂಕುಚಿತ ಯೋಚನೆ ಇದು. ಇದಕ್ಕೆ ಲೇಖಕರು ಒಂದು ಸಣ್ಣ ಉದಾಹರಣೆ ಹೇಳುತ್ತಾರೆ : 'ಒಮ್ಮೆ ನಮ್ಮ ಪರಿಚಿತ ಮಹನೀಯರೊಬ್ಬರು ನಮ್ಮಲ್ಲಿ ಬಂದರು. ಅವರು ದಿನನಿತ್ಯ ಸ್ನಾನ , ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು. ಒಂದು ದಿನ ನಾನು ಊಟದ ಸಮಯದಲ್ಲಿ , “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ? ” ಎಂದು ಅವರನ್ನು ಕೇಳಿದೆ. ನಾನು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾದರು. “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ನಾನು ಗುಣಗ್ರಹಣಕ್ಕಾಗಿ ಅಲ್ಲ. ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗಂಥಪಠಣ ಮಾಡುತ್ತೇನೆ ” ಎಂದರು ! 'ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

3. ತಿಲಕರು ಮತ್ತು ಶಿವಾಜಿಯವರನ್ನು ಜನ ಹೇಗೆ ಸ್ವೀಕರಿಸಿದ್ದಾರೆ? ಈ ಬಗ್ಗೆ ಲೇಖಕರು ಯಾವ ಅಭಿಪ್ರಾಯ ತಳೆದಿದ್ದಾರೆ?

ಉತ್ತರ : ಎಲ್ಲಿಯಾದರೂ , ಯಾರಾದರೊಬ್ಬ ಕರ್ತೃತ್ವವುಳ್ಳ ಅಥವಾ ವಿಚಾರವಂತ ವ್ಯಕ್ತಿ ಜನ್ಮತಾಳಿದರೆ ಸಾಕು , ನಾವು ಆತನನ್ನು ಅವತಾರಿಗಳ ಶ್ರೇಣಿಗೆ ತಳ್ಳಿಬಿಡುತ್ತೇವೆ. ಅವನಿಗೆ ದೇವತ್ವವನ್ನು ಹೊರಿಸಲು ಕಿಂಚಿತ್ತೂ ತಡಮಾಡವು. ಈಗಂತೂ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ. ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ. “ ಶಿವಚರಿತೆ ” ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ. ಬಿಡಿ , ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿಹೋದ ನಾಯಕರು. ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ. ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದಗಳನ್ನು ಕೊಡಲಾಗಿತ್ತು ! ಈ ರೀತಿ ನಮ್ಮ ಮಹಾಪುರುಷರನ್ನು ದೇವತೆಗಳ ಶ್ರೇಣಿಗೆ ತಳ್ಳುವುದು ನಿಜಕ್ಕೂ ಅದೆಷ್ಟು ವಿಚಿತ್ರ ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ , ಅವರಾಗಲೇ ದೇವಸ್ಥಾನ ಸೇರಿದಂತೆಯೇ ಲೆಕ್ಕ ! ಅಲ್ಲಿ ಅವರ ಪೂಜೆಯೇನೋ ಭಾವಭಕ್ತಿಗಳಿಂದ ನಡೆಯುತ್ತದೆ ; ಆದರೆ ಅವರ ಗುಣಗಳನ್ನು ಅನುಸರಿಸುವ ಸೊಲ್ಲು ಮಾತ್ರ ಕೇಳುವುದಿಲ್ಲ. ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.


4. ಆದರ್ಶ ವ್ಯಕ್ತಿ ದೋಷರಹಿತನಾಗಿರಬೇಕಾದ್ದು ಮುಖ್ಯ , ಏಕೆ?

ಉತ್ತರ : ನಮ್ಮಿಂದ ಎಂದೂ ದೂರವಾಗದಂಥ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶ ಆಗಬಲ್ಲನು , ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಯಾವುದೇ ದೋಷ ಇಲ್ಲದವನೆಂದು ಭಾವಿಸುವವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ , ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು , ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ. ಆದ್ದರಿಂದ ಆದರ್ಶ ವ್ಯಕ್ತಿಯನ್ನು ಕುಂತು. ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ , ಅಷ್ಟೇ ಅಲ್ಲ , ನಾವು ಆದರ್ಶವೆಂದು ಭಾವಿಸುವ ಎಲ್ಲ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು. ಆದ್ದರಿಂದ ನಾವು ಯಾರ ಗುಣಗಳನ್ನನುಸರಿಸಲು ಸಾಧ್ಯವೋ ಅಂಥ ನಿರ್ದೋಷ ವ್ಯಕ್ತಿಯನ್ನೇ ಆದರ್ಶವಾಗಿ ಭಾವಿಸಬೇಕಾಗಿದೆ. ಯಾರ ಜೀವನವೆಂಬ ಹೂವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಕಳಂಕವಿಲ್ಲದಿರುವುದೋ , ಸ್ವಚ್ಛಂದವಾಗಿ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ , ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು.


5. ಶ್ರೀಕೃಷ್ಣನನ್ನು ಕೇವಲ ಪುಣ್ಯಸಂಚಯಕ್ಕಾಗಿ ಪೂಜಿಸುವುದು ಸರಿಯಲ್ಲ – ಲೇಖಕರು ಹೀಗೆ ಹೇಳಲು ಕಾರಣವೇನು?

ಉತ್ತರ : ಕಾರಣವೇನೆಂದರೆ , ಮಹಾಪುರುಷರ ವಿಷಯದಲ್ಲಿ ಕೆಲವು ವಿಚಿತ್ರ ಭಾವನೆಗಳು ಸಮಾಜದಲ್ಲಿ ಬೇರೂರಿಬಿಟ್ಟಿವೆ. ಉದಾಹರಣೆಗೆ : ಶ್ರೀಕೃಷ್ಣನನ್ನು ಆದರ್ಶ ಎನ್ನಬಹುದಾದಂಥ ಹಲವಾರು ಮಹಾನ್ ಕಾರ್ಯಗಳನ್ನು ಅವನು ತನ್ನ ಜೀವನದಲ್ಲಿ ಸಾಧಿಸಿದ್ದಾನೆ. ಆದರೆ ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ ಅವನಾದರೋ ದೇವರು , ಪೂರ್ಣಾವತಾರನಾಗಿದ್ದ ; ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೆ? ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ. ಶ್ರೀಕೃಷ್ಣನಂತಹ ಪೂರ್ಣ ಪುರುಷರನ್ನು ಈಶ್ವರನ ಅಥವಾ ಅವತಾರಿಗಳ ಸಾಲಿಗೆ ತಳ್ಳಿ , ಅವರಂತೆ ನಡೆಯುವುದು ನಮ್ಮ ಶಕ್ತಿಗೆ ನಿಲುಕದ ವಿಷಯವೆಂಬ ಭಾವನೆ ಬಂದಿದೆ. ಶ್ರೀರಾಮ ಶ್ರೀಕೃಷ್ಣರನ್ನು ಪೂಜಿಸುವುದು , ರಾಮಾಯಣ , ಮಹಾಭಾರತ , ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ ,ಕೇವಲ ಮಣ್ಯಸಂಚಯಕ್ಕಾಗಿ 'ಎಂಬುದು ಸಂಕುಚಿತ ಆಲೋಚನೆಯಾಗಿದೆ.


ಈ ) ಈ ಕೆಳಗಿನ ವಾಕ್ಯಗಳ ಅರ್ಥ ಸ್ವಾರಸ್ಯವನ್ನು ಆರೇಳು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ.


1. ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ?

ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ 'ಪ್ರೇರಣಾ 'ಎಂಬ ಕೃತಿಯಿಂದ ಆರಿಸಲಾದ 'ನಿಜವಾದ ಆದರ್ಶ ಪುರುಷ ಯಾರಾಗಬೇಕು? 'ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ 

ಸಂದರ್ಭ : ಒಮ್ಮೆ ಲೇಖಕರಿಗೆ ಪರಿಚಿತರಾದ ಮಹನೀಯರೊಬ್ಬರು ಅವರಲ್ಲಿಗೆ ಬಂದರು. ಅವರು ದಿನನಿತ್ಯ ಸ್ನಾನ , ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು. ಒಂದು ದಿನ ಲೇಖಕರು ಊಟದ ಸಮಯದಲ್ಲಿ , “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ? ” ಎಂದು ಅವರನ್ನು ಕೇಳಿದರು. ಅವರು ಅಷ್ಟು ಕೇಳಿದ್ದೇ ತಡ ಅವರು ಕೆರಳಿ ಕೆಂಡವಾಗಿ ಸಂದರ್ಭದಲ್ಲಿ “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ನಾನು ಗುಣಗ್ರಹಣಕ್ಕಾಗಿ ಅಲ್ಲ. ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆ ” ಎಂದು ಹೇಳಿದ ಮಾತನ್ನು ಲೇಖಕರು ಇಲ್ಲಿ ಉದಾಹರಿಸಿದ್ದಾರೆ.

ಸ್ವಾರಸ್ಯ : ರಾಮಾಯಣ , ಉನ್ನತ ಮೌಲ್ಯಗಳನ್ನು ಮಹಾಭಾರತದಂತಹ ಕಾವ್ಯಗಳ ಮೂಲ ಉದ್ದೇಶ ಮಾನವನ ಜೀವನದಲ್ಲಿ ಬಿತ್ತುವುದು. ಆದರೆ ಅವುಗಳನ್ನು ಓದುವುದು ಕೇವಲ ಪುಣ್ಯಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಎಂದು ಲೇಖಕರ ಪರಿಚಿತರು ಹೇಳಿದ ಮಾತನ್ನು ವ್ಯಂಗ್ಯಭರಿತವಾಗಿ ಹೇಳಿರುವುದು ಸ್ವಾರಸ್ಯಕರವಾಗಿದೆ.


2. ಮೊಗ್ಗುಗಳ ಬದಲು ಪೂರ್ಣ ಅರಳಿದ ಮುಷ್ಪಗಳು ನಮ್ಮ ಆದರ್ಶವಾಗಬೇಕು.

ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ 'ಪ್ರೇರಣಾ 'ಎಂಬ ಕೃತಿಯಿಂದ ಆರಿಸಲಾದ 'ನಿಜವಾದ ಆದರ್ಶ ಪುರುಷ ಯಾರಾಗಬೇಕು? 'ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.

ಸಂದರ್ಭ : ಲೇಖಕರು , ನಾವು ಎಂತಹವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಸ್ವೀಕರಿಸಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಆ ಕ್ರಿಮಿಕೀಟಗಳಿಂದಾಗಿ ಮುಂದೆ ಅವು ಪೂರ್ಣವಾಗಿ ಅರಳಲಾರವು. ಆದ್ದರಿಂದ ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಯಾರ ಧೈಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು 'ಎಂದು ಲೇಖಕರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಸ್ವಾರಸ್ಯ : ಇನ್ನೂ ಮೊಗ್ಗಿನಂತೆ ಮುದುಡಿರುವ ವ್ಯಕ್ತಿಗಳು ಒಳಗೆ ಕ್ರಿಮಿಕೀಟಗಳನ್ನು ಹೊಂದಿರಬಹುದಾದ ಮೊಗ್ಗುಗಳಂತೆ 'ಎಂದು ಹೋಲಿಸಿ , ಆದರೆ ನಿಜವಾದ ಆದರ್ಶ ವ್ಯಕ್ತಿಗಳು ಅರಳಿದ ಹೂವಿನಂತೆ. ಕ್ರಿಮಿರಹಿತವಾದ ಅರಳಿದ ಹೂವನ್ನು ಸ್ವೀಕರಿಸುವಂತೆ ಯಾರ ಮನಸ್ಸು ಅರಳಿ ಪ್ರಸನ್ನವಾಗಿದೆಯೋ ಅಂತಹ ವ್ಯಕ್ತಿಯನ್ನು ಆದರ್ಶವಾಗಿ ಸ್ವೀಕರಿಸಬೇಕು 'ಎಂಬುದು ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ.

 

ನಿಜವಾದ ಆದರ್ಶ ಪುರುಷ ಯಾರಾಗಬೇಕು?: ಹೆಚ್ಚುವರಿ ಪ್ರಶ್ನೆಗಳು :

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸಿ.


1. ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಯಾವ ಪಟ್ಟಿಗೆ ಹಾಕಲಾಗಿದೆ?

ಉತ್ತರ : ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ.


2. ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ ಅವರನ್ನು ಎಲ್ಲಿಗೆ ಸೇರಿಸಲಾಗುತ್ತದೆ?

ಉತ್ತರ : ಮಹಾನ್ ವಿಭೂತಿ ಪುರುಷರು ಕಣ್ಣಿಗೆ ಬೀಳುವುದೇ ತಡ ಅವರು ದೇವಸ್ಥಾನ ಸೇರಿದಂತೆಯೇ ಸರಿ.


3. ಮೂರ್ತಿ ಪೂಜೆಯು ಯಾವುದಕ್ಕೆ ಒಂದು ಸುಲಭ ಸಾಧನವಾಗಿದೆ?

ಉತ್ತರ : ಜನಸಾಮಾನ್ಯರಿಗೆ ವಿಶ್ವಶಕ್ತಿಯ ನಿರಾಕಾರ ಸ್ವರೂಪದ ಅರಿವು ಮೂಡಿಸಲು ಮೂರ್ತಿ ಪೂಜೆಯು ಒಂದು ಸುಲಭ ಸಾಧನ.


4. ರಾಮಾಯಣ , ಮಹಾಭಾರತ , ಗೀತೆ ಮುಂತಾದವುಗಳನ್ನು ಪಠಿಸುವ ಉದ್ದೇಶದ ಬಗೆಗೆ ಇರುವ ಸಂಕುಚಿತ ಯೋಚನೆ ಏನು?

ಉತ್ತರ : ರಾಮಾಯಣ , ಮಹಾಭಾರತ , ಗೀತೆ ಮುಂತಾದ ಶ್ರೇಷ್ಠ ಗ್ರಂಥಗಳನ್ನು ಪಠಿಸುವುದು ಗುಣಗ್ರಹಣಕ್ಕಾಗಿ ಅಲ್ಲ , ಕೇವಲ ಪುಣ್ಯಸಂಚಯಕ್ಕಾಗಿ ಎಂಬ ಸಂಕುಚಿತ ಯೋಚನೆ ಇದೆ.


ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.


1. ಹೊಸಹೊಸ ವ್ಯಕ್ತಿಗಳನ್ನು ಆದರ್ಶ ವ್ಯಕ್ತಿಯಾಗಿ ಹುಡುಕುವಂತಾಗುವ ಬಗ್ಗೆ ಲೇಖಕರ ಅಭಿಪ್ರಾಯವೇನು?

ಉತ್ತರ : 'ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ , ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು. ಇಲ್ಲವಾದಲ್ಲಿ ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಅವನ ಬಗ್ಗೆ ಇರುವ ಶ್ರದ್ಧೆ ಸಹ ಹಾರಿಹೋಗುವುದು ಸ್ವಾಭಾವಿಕ. ಆಗ ಮನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆದೀತು. ಹೀಗಾದರೆ ನಿತ್ಯವೂ ಹೊಸ ಹೊಸ ವ್ಯಕ್ತಿಯನ್ನು ಆದರ್ಶಕ್ಕಾಗಿ ಹುಡುಕುತ್ತ ಹೊರಡಬೇಕಾಗುತ್ತದೆ 'ಎಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.


2. ರಾಷ್ಟ್ರಧ್ವಜವನ್ನು ನೋಡಿದಾಗ ಉಂಟಾಗುವ ಭಾವನೆಗಳೇನು?

ಉತ್ತರ : 'ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ , ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆ , ಯಾವುದನ್ನು ಕಂಡ ಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆ , ಹೃದಯದಲ್ಲಿ ಅಪೂರ್ವ ಸ್ಫೂರ್ತಿಯ ಸಂಚಾರವಾಗುತ್ತದೆ. ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ.


3. ಶ್ರೀಕೃಷ್ಣನ ಅವತಾರ ಮತ್ತು ಕಾರ್ಯಗಳ ಬಗ್ಗೆ ನಮ್ಮ ಸಮಾಜದಲ್ಲಿ ರೂಢವಾಗಿರುವ ಭಾವನೆಗಳೇನು?

ಉತ್ತರ : ಶ್ರೀಕೃಷ್ಣನು ತನ್ನ ಜೀವನದಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ನಮ್ಮ ಕೈಗಳಿಂದ ಮಾಡುವುದು ಅಸಾಧ್ಯ : ಅವನಾದರೋ ದೇವರು , ಪೂರ್ಣಾವತಾರನಾಗಿದ್ದ , ದೇವರ ಅನುಕರಣೆಯನ್ನು ಮನುಷ್ಯರು ಮಾಡಲು ಸಾಧ್ಯವೆ? – ಇತ್ಯಾದಿ ಹಲವಾರು ಭಾವನೆಗಳು ನಮ್ಮ ಸಮಾಜದಲ್ಲಿ ರೂಢವಾಗಿವೆ.


4. ಲೇಖಕರು ತಮ್ಮ ಪರಿಚಿತರನ್ನು ಆಧ್ಯಾತ್ಮ ರಾಮಾಯಣದ ಆಚರಣೆಯ ಬಗ್ಗೆ ಕೇಳಿದಾಗ ಅವರು ಏನೆಂದು ಪ್ರತಿಕ್ರಿಯಿಸಿದರು?

ಉತ್ತರ : ಲೇಖಕರು ತಮ್ಮ ಪರಿಚಿತರನ್ನು ಆಧ್ಯಾತ್ಮ ರಾಮಾಯಣದ “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ? ” ಎಂದು ಕೇಳಿದಾಗ ಆ ಮಹನೀಯರು ಕೆರಳಿ ಕೆಂಡವಾಗಿ “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ನಾನು ಗುಣಗ್ರಹಣಕ್ಕಾಗಿ ಅಲ್ಲ. ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠ ಮಾಡುತ್ತೇನೆ ” ಎಂದರು.


5. ಶಿವಾಜಿ ಮತ್ತು ತಿಲಕರನ್ನು ಅವತಾರಿಗಳೆಂದು ಹೇಳಲಾಗುತ್ತಿರುವ ಬಗ್ಗೆ ಲೇಖಕರು ಏನೆಂದು ಹೇಳಿದ್ದಾರೆ?

ಉತ್ತರ : “ ಛತ್ರಪತಿ ಶಿವಾಜಿ ಮತ್ತು ಲೋಕಮಾನ್ಯ ತಿಲಕರನ್ನು ಸಹ ಅವತಾರಿಗಳ ಪಟ್ಟಿಗೆ ಹಾಕಲಾಗಿದೆ. ಶಿವಾಜಿ ಮಹಾರಾಜರನ್ನು ಶ್ರೀ ಶಂಕರರ ಅವತಾರವೆಂದು ಹೇಳಲಾಗುತ್ತಿದೆ. “ ಶಿವಚರಿತ್ರೆ ” ( ಶಿವಾಜಿಯ ಚರಿತ್ರೆಯಲ್ಲಿ ಇದರ ಸಮರ್ಥನೆಗಾಗಿ ಒಂದು ಉಲ್ಲೇಖವನ್ನೂ ಸೇರಿಸಲಾಗಿದೆ ). ಬಿಡಿ , ಲೋಕಮಾನ್ಯ ತಿಲಕರು ನಮ್ಮ ಕಾಲದಲ್ಲೇ ಆಗಿಹೋದ ನಾಯಕರು. ಆದರೆ ನಾನೊಮ್ಮೆ ಅವರದೊಂದು ಚಿತ್ರ ನೋಡಿದೆ. ಅದರಲ್ಲಿ ಅವರನ್ನು ಚತುರ್ಭುಜರನ್ನಾಗಿ ಮಾಡಿ , ಕೈಗಳಲ್ಲಿ ಶಂಖ , ಚಕ್ರ , ಗದೆ , ಪದ್ಯಗಳನ್ನು ಕೊಡಲಾಗಿತ್ತು ! ” ಎಂದು ಹೇಳಿದ್ದಾರೆ.


ಸಂದರ್ಭ ಸಹಿತ ಸ್ವಾರಸ್ಯ ಬರೆಯಿರಿ.


1. “ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ ”

ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ 'ಪ್ರೇರಣಾ 'ಎಂಬ ಕೃತಿಯಿಂದ ಆರಿಸಲಾದ 'ನಿಜವಾದ ಆದರ್ಶ ಪುರುಷ ಯಾರಾಗಬೇಕು? 'ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.

ಸಂದರ್ಭ : ಲೇಖಕರು. ಆದರ್ಶ ವ್ಯಕ್ತಿಯನ್ನು ಆರಿಸುವಾಗ ವಹಿಸಬೇಕಾದ ಎಚ್ಚರಿಕೆಯನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಎಲ್ಲಾ ಒಳ್ಳೆಯಗುಣಗಳನ್ನು ಹೊಂದಿರುವ ಹಾಗೂ ಯಾವುದೇ ದೋಷವಿಲ್ಲದ ವ್ಯಕ್ತಿಯನ್ನು ನಮ್ಮ ಆದರ್ಶ ವ್ಯಕ್ತಿಯನ್ನಾಗಿ ಆರಿಸಬೇಕು. ಇಲ್ಲವಾದಲ್ಲಿ ನಾವು ಆರಿಸಿದ ವ್ಯಕ್ತಿಯಿಂದ ಏನಾದರು ತಪ್ಪಾದರೆ ನಾವು ಬೇರೊಬ್ಬನನ್ನು ಹುಡುಕಬೇಕಾಗುತ್ತದೆ. ಆ ಎರಡನೆಯವನಲ್ಲಿ ದೋಷ ಕಂಡುಬಂದರೆ , ಆಗ ಪುನಃ ನಾವು ಮೂರನೆಯ ವ್ಯಕ್ತಿಯನ್ನು ಹುಡುಕುವಂತೆ ಆಗಬಹುದು. ಆದ್ದರಿಂದ “ ಆದರ್ಶ ವ್ಯಕ್ತಿಯನ್ನು ಕುರಿತು ಯೋಚಿಸುವಾಗ ದೋಷರಹಿತ ವ್ಯಕ್ತಿಯನ್ನಾರಿಸುವುದೇ ಯೋಗ್ಯ. ” ಎಂದು ಲೇಖಕರು ಸಲಹೆ ನೀಡಿದ್ದಾರೆ.

ಸ್ವಾರಸ್ಯ : ಆದರ್ಶ ವ್ಯಕ್ತಿಯನ್ನು ಹುಡುಕುವುದು ಬಹಳ ಕಷ್ಟದ ಕೆಲಸ. ಏಕೆಂದರೆ ನಾವು ಆದರ್ಶ ಎನಿಸಿಕೊಂಡ ವ್ಯಕ್ತಿ ಏನಾದರು ತಪ್ಪು ಮಾಡಿದರೆ ನಮ್ಮ ಆಯ್ಕೆ ತಪ್ಪಾಗುತ್ತದೆ. ಆದ್ದರಿಂದ ನಮ್ಮ ಆದರ್ಶ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆರಿಸಬೇಕೆಂಬುದು ಇಲ್ಲಿನ ಸ್ವಾರಸ್ಯವಾಗಿದೆ.


2. “ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ. ”

ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ 'ಪ್ರೇರಣಾ 'ಎಂಬ ಕೃತಿಯಿಂದ ಆರಿಸಲಾದ 'ನಿಜವಾದ ಆದರ್ಶ ಪುರುಷ ಯಾರಾಗಬೇಕು? 'ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.

ಸಂದರ್ಭ : ಲೇಖಕರು , ಜನರು ಮೂರ್ತಿ ಪೂಜೆ ಮಾಡುವುದಕ್ಕೆ ಕಾರಣವನ್ನು ತಿಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಆದೃಶ್ಯ , ಅವ್ಯಕ್ತ ಹಾಗೂ ಅಸ್ಪಷ್ಟ ವಿಶ್ವಚಾಲಕ ಶಕ್ತಿಯನ್ನು ನಿರ್ಗುಣ ಮತ್ತು ನಿರಾಕಾರ ರೂಪದಲ್ಲಿ ಪೂಜೆ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಆ ವಿಶ್ವವ್ಯಾಪೀ ಶಕ್ತಿಯದೇ ದೃಶ್ಯರೂಪವಾಗಿ ಭಾವಿಸಿ ಮೂರ್ತಿಯನ್ನು ಜನರು ಪೂಜಿಸುತ್ತಾರೆ. ಆದರೂ ಮೂರ್ತಿಪೂಜೆಯೇ ಧರ್ಮದ ಜೀವಾಳವಲ್ಲ. ಒಂದು ವಿಶಿಷ್ಟ ತತ್ತ್ವವು ಆ ಮೂರ್ತಿಯ ರೂಪದಲ್ಲಿ ಗೋಚರವಾಗುತ್ತದೆ ಎಂಬ ಕಾರಣಕ್ಕೆ ಅದಕ್ಕೆ ಪೂಜೆ ಸಲ್ಲುತ್ತದೆ. ಎಂದಿದ್ದಾರೆ.

ಸ್ವಾರಸ್ಯ : ಮೂರ್ತಿ ಪೂಜೆಯು ಕೇವಲ ಆಚರನೆಯಷ್ಟೇ ಅಲ್ಲ , ನಿರಾಕಾರ ಸ್ವರೂಪನಾದ ದೇವರನ್ನು ನೋಡಲು ಸಾಧ್ಯವಿಲ್ಲದಿರುವುದರಿಂದ ಅದಕ್ಕೊಂದು ರೂಪ ಕೊಟ್ಟು ಸಾಂಕೇತಿಕವಾಗಿ ಪೂಜಿಸಲಾಗುತ್ತದೆಯೇ ಹೊರತು ಧರ್ಮದ ಜೀವಾಳವಲ್ಲ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.


3. “ ನೀವು ಈಗಾಗಲೇ ಪಠಿಸಿರುವ ಅಧ್ಯಾಯಗಳನ್ನು ಆಚರಣೆಯಲ್ಲಿ ತರಲು ಯತ್ನಿಸಿರಬೇಕು ಅಲ್ಲವೆ? ”

ಆಯ್ಕೆ : ಈ ವಾಕ್ಯವನ್ನು ಕೇಶವ ಬಲಿರಾಮ ಹೆಡಗೇವಾರರು ರಚಿಸಿರುವ 'ಪ್ರೇರಣಾ 'ಎಂಬ ಕೃತಿಯಿಂದ ಆರಿಸಲಾದ 'ನಿಜವಾದ ಆದರ್ಶ ಪುರುಷ ಯಾರಾಗಬೇಕು? 'ಎಂಬ ಗದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.

ಸಂದರ್ಭ : ಲೇಖಕರು , ಒಮ್ಮೆ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಪ್ರತಿನಿತ್ಯ ಓದುತ್ತಿದ್ದಂತಹ ಅವರ ಪರಿಚಿತ ವ್ಯಕ್ತಿಯೊಬ್ಬರಿಗೆ ಈ ಮಾತನ್ನು ಹೇಳಿದರು. ಅವರ ಆ ಪರಿಚಿತ ಮಹನೀಯರು ದಿನನಿತ್ಯ ಸ್ನಾನ ಸಂಧ್ಯಾವಂದನೆಗಳಾದ ನಂತರ ಅಧ್ಯಾತ್ಮ ರಾಮಾಯಣದ ಒಂದು ಅಧ್ಯಾಯವನ್ನು ಓದುತ್ತಿದ್ದರು. ಇದನ್ನು ನೋಡಿದ ಲೇಖಕರು ಅವರನ್ನು ಕುರಿತು ಈ ಪ್ರಶ್ನೆಯನ್ನು ಕೇಳಿದರು. ಆಗ ಆ ಮಹನೀಯರು ಕೋಪದಿಂದ “ ನೀವು ಶ್ರೀರಾಮಚಂದ್ರನ , ಆ ಪ್ರತ್ಯಕ್ಷ ಭಗವಂತನ ಅಪಹಾಸ್ಯ ಮಾಡುವಿರಾ? ಭಗವಂತನ ಗುಣ ಎಂದಾದರೂ ಮನುಷ್ಯನಲ್ಲಿ ಬಂದೀತೆ? ನಾನು ಗುಣಗ್ರಹಣಕ್ಕಾಗಿ ಅಲ್ಲ , ಆದರೆ ಪುಣ್ಯ ಸಂಚಯ ಹಾಗೂ ಮೋಕ್ಷಪ್ರಾಪ್ತಿಗಾಗಿ ಗ್ರಂಥಪಠಣ ಮಾಡುತ್ತೇನೆ ” ಎಂದು ಹೇಳಿದರು.

ಸ್ವಾರಸ್ಯ : ರಾಮಾಯಣದಂತಹ ಕಾವ್ಯಗಳನ್ನು ಕೇವಲ ಪುಣ್ಯಗಳಿಸುವುದಕ್ಕಾಗಿ ಓದುವುದು ಸರಿಯಲ್ಲ. ಅವುಗಳನ್ನು ಓದಿ , ಅಲ್ಲಿರುವ ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ಅವುಗಳನ್ನು ಬರಿದೆ ಓದುವ ಮಾತ್ರದಿಂದ ಮಣ್ಯ ಸಿಗಲಾರದು ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads