Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 30 July 2022

ಕರ್ನಾಟಕ ಪ್ರಥಮ ಪಿಯುಸಿ ದೇವನೊಲಿದನ ಕುಲವೇ ಸತ್ಕುಲಂ ಸಂಪೂರ್ಣ ನೋಟ್ಸ್ Karnataka 1st PUC Devanolidana Kulave Satkulam Complete Notes in Kannada

 

ಕರ್ನಾಟಕ ಪ್ರಥಮ ಪಿಯುಸಿ ದೇವನೊಲಿದನ ಕುಲವೇ ಸತ್ಕುಲಂ ಸಂಪೂರ್ಣ ನೋಟ್ಸ್

Karnataka 1st PUC Devanolidana Kulave Satkulam Complete Notes in Kannada



ಕವಿ ಪರಿಚಯ : ರಗಳೆ-ಕವಿ : ಹರಿಹರ (1190-1250)
'ರಗಳೆಕವಿ' ಎಂದು ಪ್ರಸಿದ್ಧನಾಗಿರುವ ಹರಿಹರ ದ್ವಾರಸಮುದ್ರದ ಹೊಯ್ಸಳ ವೀರನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ಕರಣಿಕನಾಗಿದ್ದನು. ರಾಜಾಶ್ರಯವನ್ನು ತಿರಸ್ಕರಿಸಿ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ಕಾವ್ಯ ರಚನೆಗೆ ತೊಡಗಿದನು. ಶಿವ ಮತ್ತು ಶಿವಭಕ್ತರನ್ನೇ ಕುರಿತು ಕಾವ್ಯ ರಚಿಸುವ ದಿಟ್ಟ ನಿಲುವನ್ನು ತಳೆದ ಇವನು ನೂರಕ್ಕೂ ಹೆಚ್ಚು ರಗಳೆಗಳು ಹಾಗೂ 'ಗಿರಿಜಾಕಲ್ಯಾಣ'ವೆಂಬ ಚಂಪೂಕಾವ್ಯವನ್ನು ರಚಿಸಿದ್ದಾನೆ. 'ಪಂಪಾಶತಕ', 'ರಕ್ಷಾಶತಕ', 'ಮುಡಿಗೆಯ ಅಷ್ಟಕ'ಗಳನ್ನೂ ರಚಿಸಿದ್ದಾನೆ. ಹರಿಹರನ ರಗಳೆಗಳ ಮೂಲದ್ರವ್ಯ ಹರಭಕ್ತಿ, ಶಿವಭಕ್ತರು ಇವನ ಕಥಾನಾಯಕರು. ಇವರು ಒಂದಲ್ಲಾ ಒಂದು ರೀತಿ ಗುಪ್ತಭಕ್ತಿಯಿಂದ ಶಿವನನ್ನು ಆರೋಗಿಸುವವರೇ ಆಗಿರುತ್ತಾರೆ. ಭಕ್ತರ ಗುಪ್ತಭಕ್ತಿಯನ್ನು ಇತರರಿಗೆ ತಿಳಿಸುವ ಸಲುವಾಗಿ ಶಿವ ಮಾರುವೇಷದ ಮೂಲಕ ಭಕ್ತರನ್ನು ಪರೀಕ್ಷಿಸುವುದರ ಜೊತೆಗೆ ಅವರ ಭಕ್ತಿಯನ್ನು ಪ್ರಕಟಗೊಳಿಸುವುದೇ ಆಗಿದೆ.
ದೇವನೊಲಿದನ ಕುಲವೇ ಸತ್ಕುಲಂ ಪದ್ಯಭಾಗದ ಆಶಯ:-
ಪ್ರಸ್ತುತ ರಗಳೆಯಲ್ಲಿ ಚೆನ್ನಯ್ಯನ ಶಿವಭಕ್ತಿಯನ್ನು ಅನಾವರಣಗೊಳಿಸುತ್ತಾನೆ. ಚೋಳನಾಡಿನಲ್ಲಿ ಹರಿಯುತ್ತಿರುವ ಕಾವೇರಿಯ ವರ್ಣನೆಯನ್ನು ಕಾಣಬಹುದು. ಅರಸನ ಮತ್ತು ಆಳಿನ ಮುಖಾಮುಖಿಯ ಜೊತೆಗೆ ಸರಳಭಕ್ತಿಯೇ ಶ್ರೇಷ್ಠವೆಂದು ಸಾರುವ ವಿಚಾರ ಇಲ್ಲಿದೆ.
ದೇವನೊಲಿದನ ಕುಲವೇ ಸತ್ಕುಲಂ ಪದಕೋಶ : 1 - 50
ಸೆಜ್ಜೆ – ಲಿಂಗವಸ್ತ್ರ , ನೆಲೆ , ಶಯನ ;
ವಜ – ಗುಂಪು , ಸಮೂಹ ;
ಆರವೆ ( ಆರಮೆ ) -ಉದ್ಯಾನ ;
ಕಾವೇರಿ ( ಕಾವ + ಏರಿ ) – ಕಾಪಾಡುವ ನೀರು ;
ಸೋವೇರಿ ( ಸೋವ + ಏರಿ ) -ಪಾಪ ನಿವಾರಿಸುವ ತೀರ್ಥ ;
ವಾಚಾಮಗೋಚರ – ಮಾತಿಗೆ ನಿಲುಕದ ; ಓತು – ಒಂದಾಗಿ , ಒಲಿದು ;
ಬೀಱದ – ಪ್ರಕಟಗೊಳ್ಳದ ;
ಕಂಪಣ ( ಕಂಪಣ – ಕವಳ ) -ಮೇವು ; ಸೊಂಪು ಸೊಗಸು ;
ತಿಲ – ಎಳ್ಳು : ಕಾಷ್ಠ ಕಟ್ಟಿಗೆ ;
ನಿಧಾನ – ಸಂಪತ್ತು ; ಕಾಂತಾರ -ಕಾಡು ;
ದಿಂಟೆ ( ದಿಣ್ಣೆ ) -ದಿಣ್ಣೆ ; ಅಭವ – ಶಿವ ;
ಹರವರಿ – ಹರವು , ವಿಸ್ತಾರ ;
ಪೊರೆಯೇಱು – ಉಬ್ಬು :
ಪಡ್ಡಲಿ – ಕೆಂಜಾಜಿ , ಪಾದರಿ ;
ಓವು – ಉಪಚರಿಸು ;
ಇಂಬು – ಪ್ರೀತಿ ;
ತುರಗ – ಕುದುರೆ ;
ಸಾದರ – ಆದರ ;
ವತ್ಸರ – ವರ್ಷ .
ದೇವನೊಲಿದನ ಕುಲವೇ ಸತ್ಕುಲಂ ಪದಕೋಶ : 51 - 100
ದಳವೇಱು – ಉತ್ಸಾಹ ;
ಮೈಲ ( ಕಪ್ಪು ) -ಬೂದುಬಣ್ಣದ ಎತ್ತು ;
ಅಂಬಕಳ -ಅಂಬಲಿ , ರಾಗಿಗಂಜಿ ;
ಕಪ್ಪರ – ಮಣ್ಣಿನ ತಟ್ಟೆ :
ಆಮ್ರ – ಮಾವು ;
ಅಡ್ಡಣಿಗೆ- ಊಟದ ತಟ್ಟೆಯನ್ನು ಇಡುವ ಪೀಠ :
ಚಿಲುಪಾಲು – ಕೆನೆಹಾಲು ;
ಘಟ್ಟ ಮಣ್ಣಿನಪಾತ್ರೆ ;
ಹೆಱಸಾರು – ಹಿಂದೆ ಸರಿದು ;
ಜವನಿಕೆ – ಪರದೆ ;
ಅಲಗು -ಕತ್ತಿ ;
ಪಡಿ – ಸಮಾನ ;
ಕಱೆಗೊರಳ – ನೀಲಕಂಠ ;
ಹುರುಡು- ಪೈಪೋಟಿ , ಹೊಟ್ಟೆಕಿಚ್ಚು .
ದೇವನೊಲಿದನ ಕುಲವೇ ಸತ್ಕುಲಂ ಪದಕೋಶ : 101-160
ಸೂಡು – ತಲೆಯ ಮೇಲೆ ಧರಿಸು ;
ಅನುತಾಪ – ಸಂತಾಪ ;
ಕೋಡು – ನಡುಗು ;
ಸಮ್ಯಗ್‌ಜ್ಞಾನಿ – ಸಂಪೂರ್ಣಜ್ಞಾನಿ ;
ಅಂಘ್ರ – ಪಾದ ; ರಜ ಧೂಳು ;
ದರ್ಪಣ – ಕನ್ನಡಿ ;
ಕೆರ್ಪು – ಚಪ್ಪಲಿ ;
ಗುಡಿ – ಬಾವುಟ , ಧ್ವಜ , ತೋರಣ ;
ತಾರ್ಕಣೆ- ಪ್ರತ್ಯಕ್ಷವಾದ , ಋಜುವಾತು ;
ಹೆಱಿ – ಚಂದ್ರ
ಬೀದಿಗಱು – ಬಯಲಾಗು ;
ಹಱಲೆ – ವೃಥಾಪವಾದ ;
ಮೋನಿ – ಮೌನಿ.
ದೇವನೊಲಿದನ ಕುಲವೇ ಸತ್ಕುಲಂ ಪದ್ಯಭಾಗ ಮತ್ತು ಕನ್ನಡದಲ್ಲಿ ಸಂಪೂರ್ಣ ಸಾರಾಂಶ
ದೇವನೊಲಿದನ ಕುಲವೇ ಸತ್ಕುಲಂ ಪದ್ಯಭಾಗ ಮತ್ತು ಕನ್ನಡದಲ್ಲಿ ಸಂಪೂರ್ಣ ಸಾರಾಂಶವನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ






01. ಶಿವನ ಸಜ್ಜೆಯ ಮನೆಯಂತೆ ಮೆರೆಯುತ್ತಿದ್ದ ಚೋಳದೇಶವು ಶಿವಭಕ್ತರ ಆವಾಸಸ್ಥಾನ. ಅಂತಹ ಚೋಳ ದೇಶದಲ್ಲಿ ಕಾಲಕಾಲಕ್ಕೆ ಸರಿಯಾದ ಮಳೆ, ಬೆಳೆಬಂದು ಅದರಿಂದಲಾಗಿ ನೆರಳ ತಂಪಿನಿಂದ ಕೂಡಿ,‌ಅಲ್ಲಲ್ಲಿ ಸುಂದರ ಉದ್ಯಾನಗಳ ಸೊಬಗು ಮೇಳೆಸಿಕೊಂಡಿದ್ದು, ಸುಖ-ಸಮೃದ್ಧಿಗಳಿಂದ ಕೂಡಿದೆ. ಚೋಳನಾಡಿನಲ್ಲಿ ತುಂಬಿ ಹರಿಯುವ ಕಾವೇರಿ ನದಿಯು, ಜೀವಿಗಳ ಪಾಪಗಳನ್ನು ತೊಳೆದು ಸಕಲ ಸಸ್ಯರಾಶಿಗೆ‌ ಸಮೃದ್ಧಿಯನ್ನು ಕೊಟ್ಟು ಹರನ ಭಕ್ತಿ ರಸದಂತೆ, ಭೂ ಲೋಕದ ಅಮೃತವಾರಿಧಿಯಂತೆ ಹರಿಯುತ್ತಿತ್ತು. ಇಂತಹ ‌ದೇಶವನ್ನು ಧರ್ಮಯುಕ್ತವಾಗಿ ಕರಿಕಾಲ ಚೋಳನೆಂಬ ಅರಸನು ಪಾಲಿಸುತ್ತಿದ್ದನು.





02. ಚೋಳದೇಶದ ಸುಂದರವಾದ ರಾಜಧಾನಿಯಲ್ಲಿ ಶಬ್ದದಿಂದ ವರ್ಣಿಸಲು ಅಸಾಧ್ಯವೆಂಬಂತೆ ಮಾದರ ಜಾತಿಯ ಚೆನ್ನನೆಂಬ ಶಂಕರನ ಭಕ್ತನೊಬ್ಬನು, ಹೆಸರಿಗೆ ಅನ್ವರ್ಥವಾಗಿ ಬದುಕುತ್ತಿದ್ದನಲ್ಲದೆ ಪರಮಭಕ್ತಿಯಿಂದ ಶಿವನನ್ನು ಗುಪ್ತವಾಗಿ ಆರಾಧಿಸುತ್ತಿದ್ದನು. ಅದರ ಜೊತೆಯಲ್ಲಿ ಹೊಟ್ಟೆಪಾಡಿಗಾಗಿ ಅರಸನಾದ ಕರಿಕಾಲ ಚೋಳನ ಕುದುರೆಗೆ ಅನುದಿನವೂ ಮೇವನ್ನು ತಂದು ಹಾಕುತ್ತಿದ್ದನು. ಜೊತೆಜೊತೆಗೆ ತಪ್ಪದೆ ಶಿವಾರ್ಚನೆಯನ್ನು ಅತಿ ಶ್ರದ್ಧೆಯಿಂದ ಮಾಡುತ್ತಿದ್ದನು.




03. ಅಂತರಂಗದಲ್ಲಿ ಹಿತಕರವಾದ ಭಕ್ತಿಯನ್ನಿರಿಸಿ, ವ್ಯವಹಾರದಲ್ಲಿ ಕುಲದ ಕಸುಬನ್ನು ಶ್ರದ್ಧೆಯಿಂದ ‌ಮಾಡಿಕೊಂಡಿದ್ದನು. ಅಂತರಂಗದಲ್ಲಿ ಎಲ್ಲ ಬಂಧನಗಳಿಂದ ಕಳಚಿಕೊಂಡು ಹೊರಗಡೆಯಿಂದ ಜಾತಿಯ ಸೊಗಸನ್ನು ಹೊಂದಿ, ಎಳ್ಳಿನಲ್ಲಿ ಸೇರಿಕೊಂಡಿರುವ ಎಣ್ಣೆಯಂತೆ, ಕಟ್ಟಿಗೆಯೊಳಗೆ ಮರೆಯಾಗಿರುವ ಬೆಂಕಿಯಂತೆ, ನೆಲದೊಳಗೆ ಗುಪ್ತವಾಗಿರುವ ನಿಧಿಯಂತೆ ಹೊರಪ್ರಪಂಚ ತಿಳಿಯದ ಹಾಗೆ ಚೆನ್ನನು ಲಿಂಗಾರ್ಚನೆಯಲ್ಲಿ ತೊಡಗಿಕೊಂಡಿದ್ದನು. ಅನ್ಯರು ತಿಳಿಯುವಂತೆ ಬಹಿರಂಗವಾಗಿ ಕುಲಕ್ಕೊಪ್ಪುವ ವ್ಯವಹಾರದಲ್ಲಿ ತೊಡಗಿಕೊಂಡಿದ್ದನು. ಸೂರ್ಯೋದಯದ ಕಾಲಕ್ಕೆ ಎದ್ದು ಅರಣ್ಯವನ್ನು ಪ್ರವೇಶಿಸಿ, ಒಲವಿನಿಂದ ಪರಿಶುದ್ಧವಾದ ನದಿ ತೀರದ ಮರಳದಿಣ್ಣೆ ಮೇಲೆ ಚಿಗುರು ಹುಲ್ಲನ್ನು ಹಾಸಿ ದೃಷ್ಟಿ ಮತ್ತು ಮನಸ್ಸನ್ನು ಶಿವನ ಕಡೆಗೆ ಹರಿಸಿ ಮಂದುವರಿದು,





04. ಶಿವಲಿಂಗವನ್ನು ಯೋಗ್ಯವಾದ ಪೀಠದಲ್ಲಿ ಕುಳ್ಳಿರಿಸಿ, ಬಹುಯೋಗ್ಯವಾದ ಪರಿಮಳಯುಕ್ತವಾದ‌ ದುಂಡುಮಲ್ಲಿಗೆ, ಮಲ್ಲಿಗೆ, ಬಹುದೂರಕ್ಕೆ ಕಂಪನ್ನು ಸೂಸುವ ಸಂಪಗೆಯ ಹೂವಿಂದ, ಮರುಗ, ದವನ, ಪಚ್ಚೆ, ಕೆಂಜಾಜಿ, ಹೂಗಳಿಂದ, ಜೊತೆಗೆ ಸುರಗಿ, ಸುರ ಹೊನ್ನೆ, ಕೆಂಪುಕಣಗಿಲೆ, ಹೊಂಗೆ ಮೊದಲಾದ ‌ಹೂಗಳಿಂದ ಅಲಂಕರಿಸಿ ಶುದ್ಧ ಭಕ್ತಿಯಿಂದ ಲಿಂಗಾರ್ಚನೆಯನ್ನು ಮಾಡುತ್ತಾನೆ. ಆ ಬಳಿಕ ಬಂದು ಎಂದಿನಂತೆ ಹುಲ್ಲನ್ನು ಕೊಯ್ದು ಎತ್ತಿನ ಬೆನ್ನಿನ ಮೇಲೆ ಹೇರಿ ಅರಸನ ಕುದುರೆ ಲಾಯದೆಡೆಗೆ ಹೋಗುವಾಗಲೂ ಕಳೆದು ಹೋದ ಶಿವ ಪೂಜೆಯ ಕ್ಷಣಗಳನ್ನು ಮನಸ್ಸಿನಲ್ಲಿ ಮೆಲುಕು ಹಾಕುತ್ತಿರುತ್ತಾನೆ.






05. ಬಂದು ಚೋಳನ ಅಶ್ವಲಾಯದ ಮುಂದೆ ತನ್ನ ಜೊತೆಯ ಇತರ ಕೆಲಸಗಾರರಂತೆ ಹುಲ್ಲನ್ನು ತಂದು ಹಾಕಿ ಬಳಲಿ ತನ್ನ ಮನೆಗೆ ಬಂದು ಕುಳಿತು ಕೊಂಡಾಗ ಮನಸ್ಸು ಶಿವಲಿಂಗದಡೆಗೆ ಹರಿಯುತ್ತದೆ. ಆಗ ಅವನ ಹೆಂಡತಿ ಇದ್ದ ಗಂಜಿಯನ್ನು ಹಿಡಿದು ಕೊಂಡು ಹರಪ್ರಸಾದವೆಂದು ಗಂಡನಿಗೆ ಕೊಡುತ್ತಾಳೆ. ಚೆನ್ನನು ಸಂತೋಷದಿಂದ ಅದನ್ನು ಸ್ವೀಕರಿಸಿ ಸುಖವನ್ನು ಹೊಂದಿ ಬದುಕುತ್ತಿರುತ್ತಾನೆ. ಈ ರೀತಿ ಭೂಲೋಕದಲ್ಲಿ ಅರವತ್ತು ವರ್ಷಗಳ ಕಾಲ ಶಿವ ಪೂಜೆ ಗುಪ್ತವಾಗಿ ಅತ್ಯುತ್ಸಾಹದಿಂದ ನಡೆಯುತ್ತಿರಲು,





06. ಹರನು ಚೆನ್ನನ ಆರಾಧನೆಗೆ ಮೆಚ್ಚಿ, ಮುಂದೆ ಭೂಮಿಯಲ್ಲಿ ತನ್ನ ಭಕ್ತನೆಂದು ಪ್ರಸಿದ್ಧಿಯನ್ನು ಹೊಂದುವನೆಂದು ಭಾವಿಸುತ್ತ ಸಂತಸ ಪಡುತ್ತಾನೆ.‌ ಹೀಗಿರಲು ಒಂದು ದಿನ ಚೆನ್ನನ ಹೊಲವನ್ನು ಹೊಕ್ಕು, ಶಿವಲಿಂಗ ಪೂಜೆಯನ್ನು ಮಾಡಿ, ಸಂತೋಷದಿಂದ ಮಂದುವರಿದು, ಹುಲ್ಲುಕೊಯ್ದು ತನ್ನ ಎತ್ತಿನಮೇಲೆ ಹೇರಿಕೊಂಡು, ಅದರಿಂದ ಬೇಗಬೇಗನೆ ನಡೆತರುತ್ತ, ಕುದುರೆಗಳಿಗೆ ಮೇವನ್ನು ತಂದಿಕ್ಕಿ, ಸಂತಸದಿಂದ ಹರನ ಮನವನ್ನು ನಾಟಿರಲು, ಸಾಕ್ಷಾತ್ ಶಿವನೇ ಚೆನ್ನನ ಮನೆಗೆ ಬರುತ್ತಾನೆ. ಚೆನ್ನನು ಶಿವನನ್ನು ನೆನೆಯುತ್ತಿರಲು, ಆತನ ಮಡದಿ ಮೆಲ್ಲನೆ ಅಂಬಲಿಯನ್ನು ತಂದೀಯುತ್ತಿರಲು,



07. ಮಾವಿನ ಹಣ್ಣನ್ನು ಮೀರುವ ಮಾಧುರ್ಯವುಳ್ಳ ಅಂಬಲಿಯು ಶಿವಲಿಂಗವನ್ನು ಸ್ಪರ್ಶಿಸಲು, ಅದು ಅಮೃತದ ಕಡು ಸವಿಯ ನೂರ್ಮಡಿ ರುಚಿಕರವಾಗಿರಲು, ಸವಿದು ಸವಿದು ದಣಿವರಿಯದೆ, ಗುರುಮೂರ್ತಿ ಶಿವನು ಮುಂದುವರಿದು; ಅಂಬಲಿಯನ್ನುಂಡನು. ಕಣಕಣವನ್ನೂ ಚಪ್ಪರಿಸಿ ಚೆನ್ನನ ‌ಜೊತೆಯಾಗಿ ಸ್ವರ್ಗ-ಭೂಲೋಕಗಳಲ್ಲಿ ಅಪೂರ್ವವೆಂಬ ತೆರನಾಗಿರಲು ಚೋಳರಾಜನು ನಿತ್ಯಾನುಷ್ಠಾನಕ್ಕೆಂದು ಬಂದು ಶಿವಾಲಯವನ್ನು ಪ್ರವೇಶಿಸಿ; ಕೈಮುಗಿದು ನಿಂತುಕೊಳ್ಳುತ್ತಾನೆ. ಶಿವನಿಗೆ ದಿವ್ಯವಾದ, ದೇವಾನ್ನವನ್ನು, ಅಮೃತಾನ್ನವನ್ನು ಉಣಲೆಂದು ಬಡಿಸುತ್ತಾನೆ. ಸತ್ಕರಿಸುತ್ತಾ ಸಾಲುಸಾಲಾಗಿ ಸವಿಯಿಂದೊಡಗೂಡಿದ ಬಗೆಬಗೆಯ ವ್ಯಂಜನವನ್ನು ಬಡಿಸುತ್ತಾನೆ.




08. ಹಪ್ಪಳ, ಕೆನೆವಾಲ ಪಾತ್ರಗಳನ್ನು, ತುಪ್ಪ, ಕೆನೆಯುಕ್ತ ಮೊಸರು, ಸಕ್ಕರೆ, ಇವುಗಳನ್ನೆಲ್ಲ ಸಾಲಾಗಿ ಬಡಿಸಿಟ್ಟು ಹೊರಬರುತ್ತ ಹರನು ಉಣ್ಣಲಿ ಎಂದು ಪರದೆಯನ್ನು ಮುಚ್ಚಿ, ಶಿವನೆ ಸ್ವೀಕರಿಸೆಂದು ಸಂತೋಷದಿಂದ ನಮಸ್ಕರಿಸುತ್ತಾನೆ. ಶಿವನು ಏನನ್ನೂ ಸ್ವೀಕರಿಸದೆ,‌ ಮುಟ್ಟದೆ, ಗಮನಿಸದೆ ವಾಸನೆಯನ್ನೂ ನೋಡದೆ, ಲೆಕ್ಕಕ್ಕೆ ತರದೆ, ಸುಮ್ಮನೆ ಕುಳಿತುಕೊಂಡಿರಲು, ಕೂಡಲೆ ಚೋಳನು ಪರದೆಯನ್ನು ಸರಿಸಿ ನೋಡಲು; ಅಯ್ಯೋ! ಕೆಡುಕಾಯಿತು ಎನಲು; ಮುಂದುವರಿದು ಖಡ್ಗವನ್ನು ತೆಗೆದು ಕೊರಳನ್ನೇ ಹೊಡೆದು ಕೆಡವಲು ತೊಡಗುತ್ತಾನೆ.






09. ಇದನ್ನು ಕಂಡು ಶಂಕರನು; ಅಯ್ಯೋ! ವಿವೇಚನೆಯಿಲ್ಲದೆ ಹೀಗೆ ಮಾಡಬಹುದೆ? ನಿಮ್ಮ ಅರಸೊತ್ತಿಗೆಯನ್ನು ನನ್ನಲ್ಲಿ ಹೇರುವುದೆ? ನೋಡಯ್ಯ ಚೋಳ; ನಿನಗೆ ಸ್ವಲ್ಪವೂ ತಾಳ್ಮೆಯಿಲ್ಲ, ಇಂದು ಆ ಚೆನ್ನನ ಒಡನೆ ಉಂಡೆನಾದ್ದರಿಂದ ನನಗೆ ಹಸಿವಿಲ್ಲ. ಆ ಅಂಬಲಿಯ ರುಚಿಯನ್ನು ಏನೆಂದು ಹೊಗಳಲಿ, ಅದು ಅರಸರಿಗೂ ದುರ್ಲಭ ಎನ್ನುತ ಮರಳಿ ಶಿವಲಿಂಗವನ್ನು ಪ್ರವೇಶಿಸುತ್ತಾನೆ. ಚೋಳನು ವಿಸ್ಮಯಕ್ಕೊಳಗಾಗಿ, ಚಿಂತೆಯಲ್ಲಿ ಮುಳುಗಿ, ನೀಲಕಂಠನು ಈ ತೆರ, ಸ್ವಲ್ಪವೂ ಹೊಟ್ಟೆಯಲ್ಲಿ ಎಡೆಯಿಲ್ಲದಂತೆ ಉಣ್ಣುವುದೆ? ಎಂದು ಹೊಟ್ಟೆಕಿಚ್ಚುಪಡುತ್ತಾನೆ.





10. ಸರ್ವಶ್ರೇಷ್ಠನಾದ ಹರನಿಗೆ ಉಣಲಿತ್ತ ಶರಣ ಶ್ರೇಷ್ಠನನ್ನು ನೋಡುತ್ತೇನೆ, ಸಂತೋಷದಿಂದ ನಾನವನ‌ ಕಾರುಣ್ಯವನ್ನು ಧರಿಸಿಕೊಳ್ಳುತ್ತೇನೆ ಎಂದುಕೊಳ್ಳುತ್ತ; ನಡೆದು ಅಭ್ಯಾಸವೇ ಇರದ, ಸುಖದ ಸುಪ್ಪತ್ತಿಗೆಯಲ್ಲಿ ಇದ್ದ ಚೋಳನು ಎಡ - ಬಲದಲ್ಲಿ ಕಿರೀಟಪತಿಗಳಾದ ಮಂತ್ರಿ- ಮಾಂಡಲಿಕರೊಡನೆ ನಡೆದುಕೊಂಡೇ ಬರುತ್ತಾನೆ. ಮನದ ವ್ಯಾಕುಲತೆಯ ಅಧಿಕ್ಯದಿಂದ; “ಪುರಹರನಿಗೆ ಉಣ್ಣುವುದಕ್ಕೆ ಇಕ್ಕಿದ ಚೆನ್ನನನ್ನು ತೋರಿರಿ, ಗುರುಲಿಂಗದೊಡನೆ ಉಂಡ ಚೆನ್ನನನ್ನು ತೋರಿರಿ” ಎಂದು ಕೂಗುತ್ತಾ, ದಿಕ್ಕುದಿಕ್ಕುಗಳಿಗೂ ಅವನನ್ನು ಹುಡುಕಲೆಂದು ಭಟರನ್ನು ಕಳುಹಿಸುತ್ತ, ಕೊನೆಗೆ ಚೆನ್ನನಿರುವ ಗುಡಿಸಲ ಬಳಿಗೆ ಬರುತ್ತಾನೆ. ಚೆನ್ನನು ಮನೆಯೊಳಗಿದ್ದಾನೆಂದು ತಿಳಿಯುತ್ತಾನೆ.



11. ಅರಸನ ಬರುವಿಕೆಯನ್ನರಿತ ಚೆನ್ನಯ್ಯನು ಒಳಗೊಳಗೆ ಮರುಗುತ್ತಾ, ಏನು ನಡೆಯುತ್ತಿದೆಯೆಂದು ಅರಿಯದೆ ಬೇಸರಿಸುತ್ತ ಇರುತ್ತಾನೆ. ಅರಮನೆಯ ಭಟರು ಯಾಕಾಗಿ ನನ್ನನ್ನು ಅರಸುತ್ತ ಬಂದರೋ, ನನ್ನ ಇರವನ್ನು ಯಾಕಾಗಿ ಅರಸನಿಗೆ ತಿಳುಹಿದರೋ, ರಾಜಭಟರು ತನ್ನ ಮನೆಗೆ ಯಾಕಾಗಿ ಬಂದರೋ ಎಂದೆಲ್ಲ ವ್ಯಥಿಸುತ್ತಾನೆ. ಭಕ್ತನೆಂದು ಯಾರೂ ತಿಳಿಯದಿದ್ದರೆ ನಾನು ಚೆನ್ನಾಗಿ ಬದುಕುತ್ತಿದ್ದೆ, ತಾನು ಶಿವಭಕ್ತನೆಂದು ಪ್ರಸಿದ್ದಿ ಪಡೆದೆನೆಂದಾದರೆ ಮುಂದೆ ಬದುಕುವ ಬಗೆ ಹೇಗೆ? ಎನ್ನುತ್ತ ಚಿಂತಿಸುತ್ತಾನೆ. ಸತ್ಯನಿಧಿಯೂ ಸಮ್ಯಕ್ ಜ್ಞಾನಿಯೂ ಆದ ಕರಿಕಾಲಚೋಳನು ತನ್ನ ಪರಿವಾರದೊಡಗೂಡಿ ಚೆನ್ನನ ಮನೆಗೆ ಪ್ರದಕ್ಷಿಣೆ ಬರುತ್ತ, ಕೈಮುಗಿಯುತ್ತ ಅತಿಭಕ್ತಿಯಿಂದ ಬರುತ್ತಿದ್ದನು.



12. ಚೋಳರಾಜನು ಬೇಗಬೇಗನೆ ನಡೆತಂದು, ಗಣಪದವಿಗೆ ಅರ್ಹನಾದ ಚೆನ್ನನಿಗೆ ಪ್ರದಕ್ಷಿಣೆ ಬಂದು ಉದ್ದಂಡ ನಮಸ್ಕಾರವನ್ನು ಮಾಡುತ್ತಾನೆ. ಕರಿಕಾಲಚೋಳನ ಫಳಫಳನೆ ಹೊಳೆಯುವ ಕಿರೀಟದ ಮಣಿಕಾಂತಿಗಳಿಂದ ಚೆನ್ನನ ಪಾದ ಮತ್ತು ಭೂಮಿ ಕಂಗೊಳಿಸತೊಡಗುತ್ತದೆ. ಚೋಳನು ದಣಿವು ಉಂಟಾಗುವಷ್ಟು ಸಾರಿ ಚೆನ್ನನ ಪಾದಧೂಳನ್ನು ತನ್ನ ಕಂಗಳಿಗೊತ್ತುತ್ತ ಸಂತೋಷಿಸುತ್ತಾನೆ. ಚೆನ್ನನ ಪಾದಗಳನ್ನು ಬಲವಾಗಿ ಹಿಡಿದು, ಬಿಡದೆ ಹೆಣಗಾಡುತ್ತಿರಲು ಚೆನ್ನಯ್ಯನು, “ಏನಯ್ಯ ಚೋಳರಾಜ, ನೀನು ಹೀಗೆ ಮಾಡಬಹುದೆ ನನ್ನ ಕುಲವನ್ನು ನೋಡದೆ ನನ್ನಲ್ಲಿಗೆ ಬರಬಹುದೆ? ನನ್ನ ಜಾತಿಯನ್ನರಿಯದೆ ಹೀಗೆ ಮಾಡಬಹುದೆ? -ಎಂದು ಕೇಳುತ್ತಾನೆ.




13. ಚೆನ್ನಯ್ಯನು ಹೀಗೆನ್ನಲು; “ದೇವದೇವನು ಯಾರಿಗೊಲಿದನೋ ಅವನ ಕುಲವೇ ಸತ್ಕುಲ, ಅತ್ಯಂತ ಉತ್ತಮ ಕುಲ, ಘನ ಮಹಿಮಾ ಪರಿಶುದ್ಧವಾದುದು, ಶಿವನೊಡನೆ ಉಂಡ ನಿಮ್ಮ ಜಾತಿಗೆ ನಾನು ಸರಿಸಮಾನನಲ್ಲ, ಸರ್ವಜ್ಞನಾದ ನಿನ್ನ ಚಪ್ಪಲಿಗೂ ನಾನು ಸಮಾನನಲ್ಲ, ನಿಮ್ಮನ್ನು ಬಿಡಲಾರೆ, ನಿಮ್ಮ ಪಾದವನ್ನು ಬಿಟ್ಟು ನಾನು ಬಾಳಲಾರೆ, ಮೃಡನ ಪರಮ ಮಂಗಳಮೂರ್ತಿಯನ್ನು ಬಿಟ್ಟು ನರಕದಲ್ಲಿ ಬದುಕಲಾರೆ” ಎನ್ನುತ್ತ ಚೆನ್ನಯ್ಯನನ್ನು ಎತ್ತಿ ಆನೆಯ ಮೇಲೆ ಕುಳ್ಳಿರಿಸುತ್ತಾ, ಪುರದಲ್ಲೆಲ್ಲ ಧ್ವಜವನೇರಿಸಲು ಆಜ್ಞಾಪಿಸುತ್ತಾನೆ. ಶಿವಾಲಯದ ಮುಂದೆ ನಡೆತಂದು ನಿಂತುಕೊಂಡು, ಬಹು ಒಲವಿನಿಂದ ಆನೆಯ ಇನ್ನೊಂದು ಮಗ್ಗುಲಿಗೆ ಸಾಗಿ,




14. ಆನೆಯಿಂದ ಚೆನ್ನನನ್ನು ಮೆಲ್ಲನೆ ಆಧರಿಸಿ ಕೆಳಕ್ಕಿಳಿಸಿ,‌ ಮೆಲ್ಲನೆ ಬಂದು ದಾನನಿಧಿಯಾದ ಚೆನ್ನನನ್ನು ಮುಂದಿರಿಸಿ, ಒಡಗೂಡಿ ಬಂದು, ಶಿವಲಿಂಗದ ಮುಂದುಗಡೆ ಬಂದು ನಿಂತುಕೊಳ್ಳುತ್ತಾನೆ. ಶಿವನಿಗಭಿಮುಖವಾಗಿ ನಿಂತು ಕೊಂಡು ಚೆನ್ನನು, ಶಿವನ ಕುರಿತಂತೆ ಕಡು ಕೋಪಗೊಳ್ಳುತ್ತ, ಉನ್ನತ ಚರಿತನಾದ ನೀನು, ನನ್ನನ್ನು ಈ ತೆರ ದೂರುವುದೆ? ಚೋಳನಿಂದ ಹಿಡಿದುತರಿಸಲ್ಪಟ್ಟ ನಾನು ಮಾಡಿದ ತಪ್ಪಾದರೂ ಏನು ಹೇಳು, ನಾನು ನಿನ್ನಲ್ಲಿ ಪದವಿಯನ್ನು ಬೇಡಿದೆನೆ ಅರಿಯದೆ ನನ್ನಲ್ಲಿದ್ದ ಅಂಬಲಿಯನ್ನು ಕೊಟ್ಟುದಕ್ಕೆ ಹೀಗೆ ವರ್ತಿಸುವುದೆ? ಚಂದ್ರಧರನಾದ ನೀನು ಈ ರೀತಿ ದೂರುವುದೆ?




15. ಭೂಮಿಯಲ್ಲೆಲ್ಲ ನನ್ನ ಭಕ್ತಿ ಬಯಲಾಗಿರಲು ಬಹಳ ಮಾತೇಕೆ? ಈ ಭಕ್ತಿ ಸಮಸ್ಯೆಯನ್ನೇ ತಂದೊಡ್ಡಿತು, ಇನ್ನು ಭೂಮಿಯಲ್ಲಿ ಬದುಕಲಾರೆ . ಎಂದು ಶಪಥ ಮಾಡುತ್ತ ಚೆನ್ನನು, ಮತ್ತೆ ಮುಂದುವರಿದು, ಖಡ್ಗವನ್ನೆತ್ತಿ ತನ್ನ ಕೊರಳ ಮೇಲೆ ಹೂಡಲು, ಶಿವನು ಶಿವಲಿಂಗದಿಂದ ಪ್ರಕಟಗೊಂಡು, ಚೆನ್ನನ ಕೈ ಹಿಡಿದು; “ವಿವೇಚನೆ ಇಲ್ಲದೆ ಈ ರೀತಿ ಮಾಡುವುದು ಸರಿಯೆ? ತಿಳಿಯದೆ ತಾನು ಚೋಳರಾಜನಿಗೆ‌ ಹೇಳಿರುವುದು, ಇಷ್ಟು ಕೋಪವನೇಕೆ‌ ತಾಳುವೆ? ನಾನು ಪರಿಣಾಮವನ್ನು ತಿಳಿಯದೆ ಹೇಳಿದೆ. ಚೆನ್ನನೆ, ತಾಳ್ಮೆಯನ್ನು ಹೊಂದಿಕೊ ನಿನಗೆ ಆತುರವೇಕೆ” ಎಂದು ಶಿವನು ಚೆನ್ನನಿಗೆ ಸ್ನೇಹದಿಂದ ಮಾತನಾಡಿ ಚೋಳರಾಜನಿಗೆ ಚೆನ್ನನನ್ನು ತೋರಿ ಈ ರೀತಿಯಾಗಿ ಹೇಳಿದನು.




16. ನೋಡಯ್ಯ ಚೋಳನೆ, ಡಾಂಭಿಕತೆ, ಆಡಂಬರವನ್ನು‌ ಬಿಟ್ಟುಲಿಂಗದ ಮೇಲೆ ಅಭಿಮಾನದಿಂದ ರಹಸ್ಯವಾಗಿ ಪೂಜೆಯನ್ನು ಮಾಡಿದ ಮೌನಿ ಈ ಮಾದರ ಚೆನ್ನನೆಂದು ಕೊಂಡಾಡುತ್ತಿರಲು ಹೂಮಳೆ ಸುರಿಯಿತು. ಆಕಾಶದಲ್ಲಿ ದುಂದುಭಿ ಧ್ವನಿಯು ಮೊಳಗಲಾರಂಭಿಸಿತು. ಅಲ್ಲಿಗೆ ಬಂದ ಪುಷ್ಪಕ ವಿಮಾನದಲ್ಲಿ ಶಿವನು ಚೆನ್ನನನ್ನು ಕುಳ್ಳಿರಿಸಿಕೊಂಡು ಸಂತಸದಿಂದ ಸಂಭ್ರಮಿಸಿ ಕೈಲಾಸವನ್ನು ಪ್ರವೇಶಿಸಿ, ಸಿಂಹಾಸನವನ್ನು ಏರಿ ತನ್ನ ಪತ್ನಿ ಪಾರ್ವತಿಗೆ ಚೆನ್ನನನ್ನು ಸಂತೋಷದಿಂದ ತೋರಿಸುತ್ತಾನೆ. ಅಷ್ಟಲ್ಲದೆ ಚೆನ್ನನಿಗೆ ಗಣ ಪದವಿಯನ್ನು ಪ್ರೀತಿಯಿಂದ ಕೊಟ್ಟು ಸರ್ಪಭೂಷಣನಾದ ಶಿವನು ಅಖಿಲ ಯೋಗದಿಂದ ಶೋಭಿಸಿದನು.


ಕರ್ನಾಟಕ ಪ್ರಥಮ ಪಿಯುಸಿ ದೇವನೊಲಿದನ ಕುಲವೇ ಸತ್ಕುಲಂ ಪದ್ಯಭಾಗದ ಸಂಪೂರ್ಣ ನೋಟ್ಸ್

ಕರ್ನಾಟಕ ಪ್ರಥಮ ಪಿಯುಸಿ ದೇವನೊಲಿದನ ಕುಲವೇ ಸತ್ಕುಲಂ : ಈ ಕೆಳಗಿನ ಪ್ರಶ್ನೆಗಳಿಗೆ ಸಂದರ್ಭದೊಡನೆ ವಿವರಿಸಿ:

ಉತ್ತರ:

ಆಯ್ಕೆ: ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಚೋಳನಾಡಿನಲ್ಲಿ ಹರಿಯುವ ಕಾವೇರಿಯನ್ನು ಕವಿ ಹರಿಹರ ವಿವರಿಸುವ ಸಂದರ್ಭ ಇದಾಗಿದೆ.

ಸ್ವಾರಸ್ಯ: ಶಿವನ ನೆಲೆಯಂತಿರುವ ಚೋಳ ದೇಶದ ವರ್ಣನೆಯನ್ನು ಹರಿಹರ ಮಾಡುತ್ತಾ, ಅದು ಶಿವ ಭಕ್ತರ ಆವಾಸ ಸ್ಥಾನ ಎನ್ನುತ್ತಾನೆ. ಅಂತಹ ದೇಶದಲ್ಲಿ ಕಾವೇರಿ ನದಿಯು ಹರಿಯುತ್ತಿತ್ತು. ಹರಿಹರನ ದೃಷ್ಟಿಯಲ್ಲಿ ಕಾವೇರಿ ಸಕಲ ಪಾಪಗಳನ್ನು ಕಳೆಯುವಂತವಳು, ಸಕಲ ಸಸ್ಯಾವಳಿಗೆ ಬೇಕಾಗಿರುವ ನೀರನ್ನು ಎರೆಯುವಂತವಳು, ಚೋಳ ದೇಶದಲ್ಲಿ ಆಕೆ ಭಕ್ತಿಯ ರಸದಂತೆ ಹರಿಯುತ್ತಿದ್ದಳು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.

ಉತ್ತರ:

ಆಯ್ಕೆ: ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಕವಿ ಹರಿಹರ ಮಾದರ ಚೆನ್ನಯ್ಯನ ಗುಪ್ತ ಭಕ್ತಿಯನ್ನು ವರ್ಣಿಸುವ ಸಂದರ್ಭ ಇದಾಗಿದೆ.

ಸ್ವಾರಸ್ಯ: ಮಾದರ ಚೆನ್ನ ಅಪ್ಪಟ ಶಿವ ಭಕ್ತ, ಅವನ ಭಕ್ತಿಯಲ್ಲಿ ಯಾವುದೇ ಡಾಂಭಿಕತನ ಇರಲಿಲ್ಲ. ಚೋಳರಾಜನ ಕುದುರೆಗಳಿಗೆ ಹುಲ್ಲನ್ನು ತರುವ ಕಾಯಕ ಮಾಡುತ್ತಿದ್ದ ಈತ, ಕಾಯಕದ ಜೊತೆಗೆ ಶಿವ ಭಕ್ತಿಯನ್ನು ಬಹಳ ಶುದ್ಧವಾಗಿ ಕೈಗೊಳ್ಳುತ್ತಿದ್ದ. ಅವನಲ್ಲಿ ಅಡಕವಾದ ಭಕ್ತಿಯು ಎಳ್ಳಿನ ಒಳಗೆ ಅಡಕವಾದ ತೈಲದಂತೆ, ಮರದ ಒಳಗೆ ಅಡಕವಾದ ಬೆಂಕಿಯಂತೆ, ಭೂಮಿಯ ಒಳಗೆ ಅಡಕವಾದ ಸಂಪತ್ತಿನಂತೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಇತ್ತು ಎಂದು ಕವಿ ಹರಿಹರ ವಿವರಿಸುವಾಗ ಈ ಮೇಲಿನಂತೆ ಹೇಳುತ್ತಾನೆ.

ಉತ್ತರ:

ಆಯ್ಕೆ: ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಕವಿ ಹರಿಹರ ಮಾದಾರ ಚೆನ್ನಯ್ಯನಲ್ಲಿರುವ ಶಿವನ ಕುರಿತಾದ ಗುಪ್ತಭಕ್ತಿಯ ಉನ್ನತಿಯನ್ನು ವಿವರಿಸುವ ಸಂದರ್ಭ ಇದಾಗಿದೆ.

ಸ್ವಾರಸ್ಯ: ಮಾದರ ಚೆನ್ನನ ಭಕ್ತಿ ಅದು ಕಲ್ಮಶ ರಹಿತವಾದಂತದ್ದು. ಕಾಡಿಗೆ ಹೋದವನು ಮೊದಲು ಶಿವ ಪೂಜೆಯನ್ನು ಮಾಡಿ ಆ ನಂತರ ತನ್ನ ಕಾಯಕದಲ್ಲಿ ತಲ್ಲೀನನಾಗುತ್ತಿದ್ದ. ಹೀಗಿರಲು ಒಂದು ದಿನ ಶಿವ ಇವನ ಭಕ್ತಿಯನ್ನು ಜಗತ್ತಿಗೆ ಸಾರುವ ಮನಸ್ಸನ್ನು ಹೊಂದುತ್ತಾನೆ. ಶಿವನನ್ನು ಆರಾಧಿಸುತ್ತಾ ಎಂದಿನಂತೆ ಚೆನ್ನನೂ ಕೂಡ ಪೂಜೆಯ ನಂತರ ಹುಲ್ಲನ್ನು ಕೊಯ್ದು ಎತ್ತಿನ ಮೇಲೆ ಹೇರಿ ತಂದು ಆ ದಿನ ವಿಶೇಷವಾಗಿ ಹರನ ಮನವನ್ನು ನಾಟಿರುತ್ತಾನೆ ಎನ್ನುತ್ತಾ ಕವಿ ಈ ಮೇಲಿನಂತೆ ಹೇಳುತ್ತಾರೆ.

ಉತ್ತರ:

ಆಯ್ಕೆ: ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಕವಿಯು ಶಿವನು ಮಾದರ ಚೆನ್ನಯ್ಯನ ಜೊತೆ ಅಂಬಲಿಯನ್ನು ಸೇವಿಸಿದ ಸಂದರ್ಭವನ್ನು ವಿವರಿಸುತ್ತಾನೆ.

ಸ್ವಾರಸ್ಯ: ಒಂದು ದಿನ ಚೆನ್ನನು ಹೊಲವನ್ನು ಹೊಕ್ಕು ಶಿವ ಪೂಜೆಯನ್ನು ಮಾಡಿ, ಸಂತೋಷದಿಂದ ಮುಂದುವರೆದು, ಹುಲ್ಲು ಕೊಯ್ದು ತನ್ನ ಎತ್ತಿನ ಮೇಲೆ ಹೇರಿಕೊಂಡು ಆದರದಿಂದ ಮನೆಗೆ ಬೇಗಬೇಗನೆ ನಡೆತರುತ್ತ, ಕುದುರೆಗಳಿಗೆ ಮೇವನ್ನು ತಂದಿಕ್ಕಿ ಸಂತಸದಿಂದ ಹರನ ಮನವನ್ನು ನಾಟಿರಲು, ಸಾಕ್ಷಾತ್ ಶಿವನೆ ಚೆನ್ನನ ಮನೆಗೆ ಬಂದಿರುತ್ತಾನೆ. ಆಗ ಆತನ ಮಡದಿಯು ತಿನ್ನಲು ಅಂಬಲಿಯನ್ನು ತರುತ್ತಾಳೆ. ಮಾವಿನ ಹಣ್ಣಿನ ರುಚಿಯನ್ನು ಮೀರಿದ ಆ ಅಂಬಲಿಯನ್ನು ಶಿವ ಆಸ್ವಾದಿಸುತ್ತಾನೆ. ಇದು ಸ್ವರ್ಗಲೋಕ-ಭೂಲೋಕಕ್ಕೆ ಹೊಸತಾಗಿತ್ತು ಎನ್ನುವುದನ್ನು ಕವಿ ಮೇಲಿನ ವಾಕ್ಯದ ಮೂಲಕ ವಿವರಿಸುತ್ತಾರೆ.

ಉತ್ತರ:

ಆಯ್ಕೆ : ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಈ ಮಾತನ್ನು ಶಿವನು ಚೋಳರಾಜನಿಗೆ ಹೇಳುತ್ತಾನೆ.

ಸ್ವಾರಸ್ಯ: ಬಗೆಬಗೆಯ ಭಕ್ಷ್ಯಗಳನ್ನು ತಂದು ಚೋಳರಾಜನು ತಂದಿಡಲು, ಶಿವ ಅದನ್ನು ಸ್ವೀಕರಿಸುವುದಿಲ್ಲ. ಇದರಿಂದ ತೀವ್ರ ಆತಂಕಿತನಾದ ರಾಜ ಹಿಂದುಮುಂದು ಆಲೋಚಿಸದೇ ತನ್ನ ಕತ್ತಿಯಿಂದ ಕೊರಳನ್ನು ಕತ್ತರಿಸಿಕೊಳ್ಳಲು ಮುಂದಾಗುತ್ತಾನೆ. ಆಗ ಇದನ್ನು ಗಮನಿಸಿದ ಶಿವ ರಾಜನಲ್ಲಿ ಅಯ್ಯೋ ವಿವೇಚನೆ ಇಲ್ಲದೆ ಹೀಗೆ ಮಾಡುವುದು ಸರಿಯಲ್ಲ, ನಿನ್ನ ಅರಸುತನದ ಗುಣವನ್ನು ನನ್ನಲ್ಲಿ ಹೇರುವುದೇ ಎಂದು ಮೇಲಿನಂತೆ ಹೇಳುತ್ತಾನೆ.

ಉತ್ತರ:

ಆಯ್ಕೆ: ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಮಾದರ ಚೆನ್ನಯ್ಯನ ಮನೆಯಲ್ಲಿ ಉಂಡ ಶಿವನು ಆ ಸವಿಯನ್ನು ಹೇಳುವ ಸಂದರ್ಭದಲ್ಲಿ ಚೋಳರಾಜನಿಗೆ ಉಂಟಾಗುವ ಕೌತುಕವನ್ನು ಕವಿ ವಿವರಿಸುವ ಸಂದರ್ಭ ಇದಾಗಿದೆ.

ಸ್ವಾರಸ್ಯ: ಚೋಳರಾಜನನ್ನು ಸಮಾಧಾನ ಪಡಿಸುತ್ತಾ ಶಿವ ನಿನಗೆ ಸ್ವಲ್ಪವೂ ತಾಳ್ಮೆ ಇಲ್ಲ. ಇಂದು ನಾನು ಮಾದರ ಚೆನ್ನನ ಮನೆಯಲ್ಲಿ ಉಂಡೆನಾದ್ದರಿಂದ ನನಗೆ ಸ್ವಲ್ಪವೂ ಕೂಡ ಹಸಿವಿಲ್ಲ.ಚೆನ್ನನು ಕೊಟ್ಟ ಆ ಅಂಬಲಿಯ ರುಚಿಯನ್ನು ಏನೆಂದು ಹೊಗಳಲಿ, ಅದು ಅರಸರಿಗೂ ದರ್ಲಭ ಎನ್ನುತ್ತ ಮರಳಿ ಶಿವಲಿಂಗವನ್ನು ಸೇರುತ್ತಾನೆ. ಆಗ ಚೋಳನು ಈ ವಿಷಯದಿಂದ ವಿಸ್ಮಯಕ್ಕೊಳಗಾದನು ಎಂದು ಕವಿ ಈ ಮೇಲಿನಂತೆ ಹೇಳುತ್ತಾರೆ.

ಉತ್ತರ:

ಆಯ್ಕೆ: ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಮಾದರ ಚೆನ್ನನಿಗೆ ಚೋಳರಾಜ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಸಂಗವನ್ನು ವಿವರಿಸುವ ಸಂದರ್ಭ ಇದಾಗಿದೆ.

ಸ್ವಾರಸ್ಯ: ಮಾದರ ಚೆನ್ನನ ಗುರು ಭಕ್ತಿಯು ಅರಿವಾಗುತ್ತಿದ್ದಂತೆ, ಚೋಳ ಭೂಪಾಲನಿಗೆ ಅವನನ್ನು ಕಾಣುವ ಹಂಬಲ ತೀವ್ರವಾಗುತ್ತದೆ. ತನ್ನ ಮಂತ್ರಿ ಮಾಂಡಲಿಕರೊಡನೆ ಚೆನ್ನನಿಗಾಗಿ ಪರಿತಪಿಸುತ್ತಾ, ಹುಡುಕುತ್ತಾ ಚೆನ್ನನ ಗುಡಿಸಲಿಗೆ ಬರುತ್ತಾನೆ. ಅವನನ್ನು ನೋಡಿದ ರಾಜನಿಗೆ ಅವನ ಮೇಲಿನ ಭಕ್ತಿ ತೀವ್ರವಾಗಿ ತನ್ನ ಸರ್ವಾಂಗಗಳನ್ನು ಆತನ ಪಾದದ ಮೇಲೆ ಇಳುಹುತ್ತಾನೆ. ಇದನ್ನೇ ಕವಿ ಮೇಲಿನಂತೆ ವಿವರಿಸುತ್ತಾನೆ.

ಉತ್ತರ:

ಆಯ್ಕೆ : ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಈ ಮಾತನ್ನು ಚೋಳರಾಜನು ಹೇಳುತ್ತಾನೆ.

ಸ್ವಾರಸ್ಯ: ವಿಸ್ಮಯಕ್ಕೆ ಒಳಗಾದ ಚೋಳರಾಜ ನಂತರ ಚೆನ್ನನಿಗಾಗಿ ಪರಿತಪಿಸಿ ಆತನು ಇರುವ ಸ್ಥಳಕ್ಕೆ ಧಾವಿಸಿ ಆತನಿಗೆ ಉದ್ದಂಡ ನಮಸ್ಕಾರ ಮಾಡಿ ಪಾದವನ್ನು ಹಿಡಿದು ಬಿಡುವುದಿಲ್ಲ ಎನ್ನುತ್ತಾನೆ. ಆಗ ಚೆನ್ನನು ಏನಯ್ಯಾ ಚೋಳರಾಜ ನೀನು ಹೀಗೆ ಮಾಡಬಹುದೇ? ನನ್ನ ಕುಲವನ್ನು ನೋಡದೇ ನನ್ನಲ್ಲಿಗೆ ಬರಬಹುದೇ? ನನ್ನ ಜಾತಿಯನ್ನರಿಯದೇ ಹೀಗೆ ಮಾಡಬಹುದೇ? ಎಂದು ಕೇಳಿದಾಗ ಚೋಳ ರಾಜನು ಈ ಮೇಲಿನಂತೆ ಹೇಳುತ್ತಾನೆ.

ಉತ್ತರ:

ಆಯ್ಕೆ: ಈ ವಾಕ್ಯವನ್ನು ರಗಳೆಕವಿ 'ಹರಿಹರ' ಬರೆದ 'ದೇವನೊಲಿದನ ಕುಲವೇ ಸತ್ಕುಲಂ' ಎಂಬ ಕಾವ್ಯದಿಂದ ಆರಿಸಲಾಗಿದೆ.

ಸಂದರ್ಭ: ಶಿವನಿಂದ ತನ್ನ ಗುಪ್ತ ಭಕ್ತಿ ಬಯಲಾದ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಹೇಳುವ ಮಾತು ಇದಾಗಿದೆ.

ಸ್ವಾರಸ್ಯ: ಚೋಳ ರಾಜ ಆನೆಯಿಂದ ಚೆನ್ನನನ್ನು ಮೆಲ್ಲನೆ ಆಧರಿಸಿ ಕೆಳಕ್ಕಿಳಿಸಿ, ಅವನನ್ನು ಜೊತೆಗೂಡಿ ಶಿವಲಿಂಗದ ಮುಂದೆ ಬಂದು ನಿಂತುಕೊಳ್ಳುತ್ತಾನೆ. ಶಿವನಿಗೆ ಎದುರಾಗಿ ನಿಂತುಕೊಂಡ ಚೆನ್ನನು ಶಿವನ ಕುರಿತಂತೆ ಕಡು ಕೋಪಗೊಳ್ಳುತ್ತಾ ಉನ್ನತ ಚರಿತನಾದ ನೀನು ನನ್ನನ್ನು ಈ ತರಹ ದೂರುವುದೇ ಚೋಳನಿಂದ ತರಿಸಲ್ಪಟ್ಟ ನಾನು ಮಾಡಿದ ತಪ್ಪಾದರೂ ಏನು? ನಾನು ನಿನ್ನಲ್ಲಿ ಪದವಿಯನ್ನು ಬೇಡಿದೆನೆ? ತಿಳಿಯದೆ ನನ್ನಲ್ಲಿದ್ದ ಅಂಬಲಿಯನ್ನು ಕೊಟ್ಟುದ್ದಕ್ಕೆ ಹೀಗೆ ವರ್ತಿಸುವುದೆ? ಚಂದ್ರಧರನಾದ ನೀನು ಈ ರೀತಿ ದೂರುವುದೆ? ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.

ಕರ್ನಾಟಕ ಪ್ರಥಮ ಪಿಯುಸಿ ದೇವನೊಲಿದನ ಕುಲವೇ ಸತ್ಕುಲಂ : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಉತ್ತರ: ಚೋಳ ದೇಶವು ಶ್ರೀ ಶಿವನ ನೆಲೆಯಾಗಿತ್ತು.

ಉತ್ತರ: ಚೋಳ ದೇಶವನ್ನು ಆಳುತ್ತಿದ್ದ ದೊರೆ ಕರಿಕಾಲ ಚೋಳ,

ಉತ್ತರ: ಚೆನ್ನಯ್ಯನು ಚೋಳ ರಾಜನ ಕುದುರೆಗೆ ಮೇವಿನ ಹುಲ್ಲನ್ನು ತರುವ ಕಾಯಕ ಮಾಡುತ್ತಿದ್ದ.

ಉತ್ತರ: ಚೆನ್ನಯ್ಯನು ಹುಲ್ಲನ್ನು ಮೈಲನ ಮೇಲೆ ಹೇರಿಕೊಂಡು ಬರುತ್ತಿದ್ದನು.

ಉತ್ತರ: ಶಿವನು ಮಾದರ ಚೆನ್ನಯ್ಯನ ಜೊತೆ ಊಟ ಮಾಡಿದನು.

ಉತ್ತರ: ಚೆನ್ನಯ್ಯನನ್ನು ಹುಡುಕಲು ಚೋಳರಾಜನು ದೂತರನ್ನು ಕಳುಹಿಸಿದನು.

ಉತ್ತರ: ಚೋಳರಾಜನು ಚೆನ್ನಯ್ಯನನ್ನು ಮಠದ ಆನೆಯ ಮೂಲಕ ಶಿವಾಲಯಕ್ಕೆ ಕರೆತಂದರು.

ಉತ್ತರ: ಕೈಲಾಸದಲ್ಲಿ ಚೆನ್ನಯ್ಯನಿಗೆ ಗಣ ಪದವಿ ಲಭಿಸಿತು.

ಕರ್ನಾಟಕ ಪ್ರಥಮ ಪಿಯುಸಿ ದೇವನೊಲಿದನ ಕುಲವೇ ಸತ್ಕುಲಂ : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಉತ್ತರ: ಕಾವೇರಿಯು ಸಕಲ ಪಾಪಗಳನ್ನು ಕಳೆಯುವ ಪಾಪನಾಶಿನಿಯಾಗಿದ್ದಾಳೆ. ಸಕಲ ಸಸ್ಯಾಳಿಗಳನ್ನು ಪೊರೆಯುವವಳು ಲೋಕಕ್ಕೆ ಅಮೃತವಾರಿಧಿಯಂತಿಹಳು ಎಂದು ಕವಿ ಹರಿಹರ ಕಾವೇರಿಯ ಮಹಿಮೆಯನ್ನು ವರ್ಣಿಸುತ್ತಾನೆ.

ಉತ್ತರ: ಚೆನ್ನಯ್ಯನ ಗುಪ್ತಭಕ್ತಿಯು ಎಳ್ಳಿನಲ್ಲಿ ಅಡಕವಾಗಿರುವ ತೈಲದಂತೆ, ಮರದೊಳಗೆ (ಕಟ್ಟಿಗೆಯೊಳಗೆ) ಅಡಕವಾಗಿರುವ ಅಗ್ನಿಯಂತೆ. ನೆಲದಲ್ಲಿ ಅಡಕವಾಗಿರುವ ನಿಧಾನದಂತೆ ಅಗೋಚರವಾದುದು.

ಉತ್ತರ: ಚೆನ್ನಯ್ಯನು ಪರಿಮಳಯುಕ್ತವಾದ ಮಲ್ಲಿಗೆಗಳಿಂದ ವಿಸ್ತಾರವಾದ ಕಂಪನ್ನು ಬರುವ ಸಂಪಿಗೆ, ಮರುಗ ಪಡ್ಡಳಿ ಸುರಗಿ ಸರಹೊನ್ನೆ ಚಂಗಣಿಗಿಲೆಗಳಿಂದ ಹೂಗಳಿಂದ ಶಿವಲಿಂಗವನ್ನು ಸಿಂಗರಿಸುತ್ತಿದ್ದನು.

ಉತ್ತರ: ಚೋಳರಾಜ ಚೆನ್ನಯ್ಯನ ಪಾದಗಳನ್ನು ಹಿಡಿದಾಗ ಚೆನ್ನಯ್ಯ ಏನಯ್ಯ ಚೋಳರಾಜನೇ ಭಾನುಕುಲ ದರ್ಪಣನಾದನೀನು ಹೀಗೆಮಾಡುವುದೆ? ನನ್ನ ಜಾತಿ ಯಾವುದು ಎಂಬುವುದನ್ನು ಅರ್ಥಮಾಡಿಕೊಳ್ಳದೆ ಈ ರೀತಿ ಮಾಡುವುದೆ ಎಂದು ಪ್ರತಿಕ್ರಿಯಿಸುತ್ತಾನೆ.

ಉತ್ತರ: (ಶಿವನ) ಅರಿಯದೆ ಅಂಬಲಿಯನ್ನು ನೀಡಿದ್ದಕ್ಕಾಗಿ ನೀನು ನನ್ನ ಗುಪ್ತಭಕ್ತಿಯನ್ನು ಚೋಳರಾಜನ ಮೂಲಕ ಬಹಿರಂಗ ಮಾಡಿ ಈ ರೀತಿಯಾಗಿ ದೂರುವುದೇ ಎಂದು ಅವನ ಮೇಲೆ ಚೆನ್ನಯ್ಯನು ಮುನಿಸಿಕೊಳ್ಳುತ್ತಾನೆ.

ಉತ್ತರ: ಕೊರಳನ್ನು ಕತ್ತರಿಸಿಕೊಳ್ಳಲು ಮುಂದಾದ ಚೆನ್ನಯ್ಯನ ಎದುರು ಅವನು ಪ್ರತ್ಯಕ್ಷವಾಗಿ ವಿಚಾರ ಮಾಡದೆ ಮರೆತು ಚೋಳನಿಗೆ ಹೇಳಿದೆ. ಅದಕ್ಕಾಗಿ ಈ ರೀತಿಯ ಕಾರ್ಯ ಸರಿಯಲ್ಲ ಎಂದು ಚೆನ್ನಯ್ಯನನ್ನು ಸಮಾಧಾನ ಪಡಿಸಿದನು.

ಕರ್ನಾಟಕ ಪ್ರಥಮ ಪಿಯುಸಿ ದೇವನೊಲಿದನ ಕುಲವೇ ಸತ್ಕುಲಂ : ಈ ಕೆಳಗಿನ ಪ್ರಶ್ನೆಗಳಿಗೆ ಐದು ಆರು ವಾಕ್ಯಗಳಲ್ಲಿ ಉತ್ತರಿಸಿರಿ

ಉತ್ತರ: ಮಾದರ ಚೆನ್ನನು ಕರಿಕಾಲ ಚೋಳರಾಜ ಆಳುತ್ತಿದ್ದ ರಾಜ್ಯದಲ್ಲಿ ಇರುವ ಒಬ್ಬ ಅಪ್ಪಟ ಶಿವ ಭಕ್ತ.ಈತ ಮಾದಿಗ ಎನ್ನುವ ಕೆಳ ಪಂಗಡಕ್ಕೆ ಸೇರಿದವನಾಗಿದ್ದು, ಹೆಸರಿಗೆ ಅನ್ವರ್ಥವಾಗಿ ಬದುಕುತ್ತಿದ್ದ. ಈತ ರಾಜನ ಲಾಯದಲ್ಲಿದ್ದ ಕುದುರೆಗಳಿಗೆ ಮೇವನ್ನು ಪೂರೈಸುವ ಕಾಯಕ ಮಾಡುತ್ತಿದ್ದ. ಚೆನ್ನನು ಉದಯ ಸಮಯದೊಳಗೆ ಎದ್ದು, ಕಾಡಿಗೆ ಹೋಗಿ ನಿರ್ಮಲವಾದ ನದೀ ತೀರಕ್ಕೆ ಹೊಕ್ಕಿ ನುಣ್ಣನೆಯ ಮರಳಿನ ದಿಣ್ಣೆಯಲ್ಲಿ ಹಸಿರು ಪತ್ರೆಗಳನ್ನು ಹಾಸಿ, ಶಿವನನ್ನು ಧ್ಯಾನಿಸುತ್ತಾ ಕಣ್ಣು ಮತ್ತು ಮನಸ್ಸನ್ನು ತುಂಬಿಕೊಳ್ಳುತ್ತಿದ್ದನು. ನಂತರ ವಿಧವಿಧವಾದ ಹೂಗಳನ್ನು ತಂದು ಶಿವಲಿಂಗವನ್ನು ಸಿಂಗರಿಸುತ್ತಾ ಭಕ್ತಿಯಿಂದ ಪೂಜಿಸಿ, ನಂತರ ಕುದುರೆಗೆ ಬೇಕಾದ ಹುಲ್ಲನ್ನು ಕೊಯ್ದುಕೊಂಡು ತನ್ನ ಎತ್ತಿನ ಮೇಲೆ ಹೇರಿಕೊಂಡು ಹಿಂತಿರುಗುತ್ತಿದ್ದನು.ಚೆನ್ನನ ಈ ಭಕ್ತಿ ಗುಪ್ತವಾಗಿತ್ತು.ಯಾರಿಗೂ ಕೂಡ ಈತ ಶಿವನ ಪರಮ ಭಕ್ತ ಎಂದು ಹೇಳಲು ಅಸಾಧ್ಯವಾಗಿತ್ತು. ಭಕ್ತಿಯಲ್ಲಿ ಎಷ್ಟು ನಿಷ್ಠನಾಗಿದ್ದನೋ,ಕಾಯಕದಲ್ಲೂ ಕೂಡಾ ಅಷ್ಟೇ ನಿಷ್ಠನಾಗಿದ್ದನೋ,ಕಾಯಕದಲ್ಲೂ ಕೂಡ ಅಷ್ಟೇ ನಿಷ್ಠನಾಗಿದ್ದನು.

ಉತ್ತರ:

ಮಾದರ ಚೆನ್ನನು ಶಿವನ ಧ್ಯಾನವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದ. ಆದರೆ ಅವನ ಭಕ್ತಿಯು ಬಹಳ ಗುಪ್ತವಾಗಿ ಸಾಗುತ್ತಿತ್ತು. ಹೊರಗಿನಿಂದ ಎಷ್ಟು ನಿಷ್ಠವಾಗಿ ಕಾಯಕವನ್ನು ಮಾಡುತ್ತಿದ್ದನೋ, ಒಳಗಿನಿಂದ ಅಷ್ಟೇ ನಿಷ್ಠವಾಗಿ ಶಿವನ ಭಕ್ತಿಯಲ್ಲಿ ತೊಡಗುತ್ತಿದ್ದ.

ಉದಯ ಕಾಲದಲ್ಲಿಯೇ ಕಾಡಿಗೆ ಹೋಗಿ ಬಗೆಬಗೆಯ ಹೂವುಗಳಿಂದ ಲಿಂಗವನ್ನು ಸಿಂಗರಿಸಿ ಶಿವನನ್ನು ಧ್ಯಾನಿಸಿ ಮತ್ತೆ ತನ್ನ ಕಾಯಕವನ್ನು ಪೂರೈಸಿಕೊಂಡು ಬಂದು ಚೋಳನ ಕುದುರೆ ಲಾಯಕ್ಕೆ ಇತರ ಕೆಲಸಗಾರರಂತೆ ಹುಲ್ಲನ್ನು ತಂದು ಹಾಕಿ, ಮನೆಗೆ ಬಂದು ಶಿವನಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಿದ ಅಂಬಲಿಯನ್ನು ಸ್ವೀಕರಿಸುತ್ತಿದ್ದನು. ಈ ರೀತಿ ಭೂಲೋಕದಲ್ಲಿ ಅರವತ್ತು ವರ್ಷಗಳ ಕಾಲ ಇವನ ಶಿವ ಪೂಜೆ ಗುಪ್ತವಾಗಿ ನಡೆಯುತ್ತಿತ್ತು.

ಅದೊಂದು ದಿನ ಶಿವ ಈತನ ಭಕ್ತಿಗೆ ಒಲಿಯುತ್ತಾನೆ, ಹೀಗಿರಲು ಒಂದು ದಿನ ಚೆನ್ನನು ಹೊಲವನ್ನು ಹೊಕ್ಕು, ಶಿವಲಿಂಗ ಪೂಜೆಯನ್ನು ಮಾಡಿ,ಸಂತೋಷದಿಂದ ಮುಂದುವರಿದು ಹುಲ್ಲು ಕೊಯ್ದು ತನ್ನ ಎತ್ತಿನ ಮೇಲೆ ಹೇರಿಕೊಂಡು ಕುದುರೆ ಲಾಯಕ್ಕೆ ತಂದಿಕ್ಕಿ ಮನೆಗೆ ಬಂದು ಶಿವನನ್ನು ನೆನೆಯುತ್ತಿರುವಾಗ ಆತನ ಮಡದಿ ಆತನಿಗೆ ಅಂಬಲಿಯನ್ನು ತಂದೀಯುತ್ತಾಳೆ. ಮಾವಿನ ಹಣ್ಣನ್ನು ಮೀರುವ ಸ್ವಾದವುಳ್ಳ ಅಂಬಲಿಯು ಅವನನ್ನು ಸ್ಪರ್ಶಸಲು, ಅದು ಅಮೃತದ ಕಡು ಸವಿಯ ನೂರ್ಮಡಿಯ ರುಚಿಯಾಗಿರಲು ಶಿವನು ಅದರ ಕಣಕಣವನ್ನು ದಣಿವರಿಯದೇ ಸವಿಯುತ್ತಾನೆ. ಅದು ಆತನಿಗೆ ಬಹಳ ರುಚಿಕರವಾಗಿತ್ತು. ಸ್ವರ್ಗಲೋಕ ಮತ್ತು ಭೂಲೋಕದಲ್ಲಿ ಹೊಸತು ಎನ್ನುವ ಹಾಗೆ ಶಿವನು ಚನ್ನನ ಮನೆಯಲ್ಲಿ ಊಟ ಮಾಡಿದನು.

ಉತ್ತರ: ಚೋಳರಾಜನು ಬಹಳ ಗರ್ವದಿಂದ ಆಡಂಬರಯುತವಾಗಿ ಪೂಜೆ ಮಾಡುತ್ತಿದ್ದನು. ಶಿವನು ಮಾದರ ಚೆನ್ನನ ಅಂಬಲಿಯನ್ನು ದಣಿವರಿಯದೆ ಅದಾಗಲೇ ಸೇವಿಸಿದ್ದರೆ, ಇತ್ತ ಕರಿಕಾಲ ಚೋಳರಾಜ ಶಿವಾಲಯವನ್ನು ಪ್ರವೇಶಿಸಿ ಶಿವನಿಗೆ ಭಕ್ತಿಯಿಂದ ಕೈಮುಗಿದು ದಿವ್ಯಾನ್ನ, ದೇವಾನ್ನ, ಅಮೃತಾನ್ನವನ್ನು ಉಣಲೆಂದು ಬಡಿಸುತ್ತಿದ್ದನು. ನಂತರ ತಾನು ತಂದಿರುವ ಹಪ್ಪಳ, ಮಣ್ಣಿನ ಕುಡಿಕೆಯಲ್ಲಿ ಕೆನೆಹಾಲು, ತುಪ್ಪ, ಕೆನೆಯುಕ್ತ ಮೊಸರು, ಸಕ್ಕರೆ ಮುಂತಾದುವುಗಳನ್ನು ಸಾಲಾಗಿ ಬಡಿಸಿಟ್ಟು ಹರನು ಉಣಲಿ ಎಂದು ಪರದೆಯನ್ನು ಮುಚ್ಚಿ ಶಿವನೇ ಸ್ವೀಕರಿಸೆಂದು ಸಂತೋಷದಿಂದ ನಮಸ್ಕರಿಸುತ್ತಿದ್ದನು. ಹೀಗೆ ಕರಿಕಾಲ ಚೋಳ ಶಿವನನ್ನು ಅರ್ಚಿಸುತ್ತಿದ್ದನು.

ಉತ್ತರ: ಶಿವನಿಂದ ಮಾದರ ಚೆನ್ನನ ಭಕ್ತಿಯು ಅನಾವರಣವಾದಾಗ ಚೋಳರಾಜನು ಬಹಳ ಕೌತುಕದಿಂದ ಆತನನ್ನು ನೋಡುವ ಬಯಕೆಯನ್ನು ಹೊಂದುತ್ತಾನೆ. ಅವನಿಗಾಗಿ ತೀವ್ರವಾಗಿ ಪರಿತಪಿಸುತ್ತಾನೆ. ಸರ್ವಶ್ರೇಷ್ಠನಾದ ಹರನಿಗೆ ಉಣಲಿತ್ತ ಶರಣ ಶ್ರೇಷ್ಟನನ್ನು ನೋಡುತ್ತೇನೆ, ಸಂತೋಷದಿಂದ ನಾನವನ ಕಾರುಣ್ಯವನ್ನು ಧರಿಸುತ್ತೇನೆ ಎಂದುಕೊಳ್ಳುತ್ತಾ ನಡೆದು ಅಭ್ಯಾಸವಿರದ, ಸುಖದ ಸುಪ್ಪತ್ತಿಗೆಯಲ್ಲಿಯೇ ಇದ್ದ ಚೋಳನು ಎಡಬಲದಲ್ಲಿ ಕಿರೀಟಪತಿಗಳಾದ ಮಂತ್ರಿ ಮಾಂಡಲಿಕರೊಡನೆ ನಡೆದುಕೊಂಡೇ ಬರುತ್ತಾನೆ. ಅತಿಯಾದ ಮನೋವ್ಯಾಕುಲತೆಯಿಂದ ಪುರಹರನಿಗೆ ಉಣಲಿಕ್ಕಿದ ಚೆನ್ನನನ್ನು ತೋರಿರಿ, ಗುರುಲಿಂಗದೊಡನೆ ಉಂಡ ಚೆನ್ನನನ್ನು ತೋರಿರಿ, ಎಂದು ದಿಕ್ಕು ದಿಕ್ಕುಗಳಗೂ ಅವನನ್ನು ಹುಡುಕಲೆಂದು ಭಟರನ್ನು ಕಳುಹಿಸುತ್ತಾ, ಕೊನೆಗೆ ಚೆನ್ನನಿರುವ ಗುಡಿಸಲ ಬಳಿಗೆ ಬಂದು ಚೆನ್ನನು ಮನೆಯೊಳಗಿದ್ದಾನೆಂದು ತಿಳಿಯುತ್ತಾನೆ. ಹೀಗೆ ಚೋಳರಾಜ ಚೆನ್ನನನ್ನು ಹುಡುಕುತ್ತಾನೆ.

ಉತ್ತರ: ಚೋಳರಾಜನು ಮಾದರ ಚೆನ್ನನನ್ನು ಹುಡುಕಿ ಕೊನೆಗೆ ಆತ ಸಿಕ್ಕಾಗ ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ. ಮಾತ್ರವಲ್ಲದೆ ಅವನನ್ನು ಆನೆಯ ಮೇಲೆ ಕುಳ್ಳಿರಿಸಿ, ಪುರದಲ್ಲೆಲ್ಲ ಧ್ವಜವನ್ನು ಏರಿಸಲು ಆಜ್ಞಾಪಿಸಿ, ನಡೆತಂದು ಆನೆಯಿಂದ ಮೆಲ್ಲನೆ ಚೆನ್ನನನ್ನು ಆಧರಿಸಿ ಕೆಳಕ್ಕಿಳಸಿ, ಮೆಲ್ಲನೆ ಬಂದು ದಾನನಿಧಿಯಾದ ಚೆನ್ನನನ್ನು ಮುಂದಿರಿಸಿ ಒಡಗೂಡಿ ಬಂದು ಶಿವಲಿಂಗದ ಮುಂದುಗಡೆ ನಿಂತುಕೊಳ್ಳುತ್ತಾನೆ. ಆಗ ಚೆನ್ನನು ಶಿವನ ಕುರಿತಂತೆ ಕೋಪಗೊಳ್ಳುತ್ತಾ, ಉನ್ನತ ಚರಿತನಾದ ನೀನು ನನ್ನನ್ನು ಈ ತರಹ ದೂರುವುದೆ? ಚೋಳನಿಂದ ಹಿಡಿದು ತರಿಸಲ್ಪಟ್ಟೆ, ನಾನು ಮಾಡಿದ ತಪ್ಪಾದರೂ ಏನು? ನಾನು ನಿನ್ನಲ್ಲಿ ಪದವಿಯನ್ನು ಬೇಡಿದೆನೆ? ತಿಳಿಯದೆ ನನ್ನಲ್ಲಿದ್ದ ಅಂಬಲಿಯನ್ನು ಕೊಟ್ಟುದಕ್ಕೆ ಹೀಗೆ ವರ್ತಿಸುವುದೆ ಚಂದ್ರಧರನಾದ ನೀನು ಈ ರೀತಿ ದೂರುವುದೆ? ಎಂದು ಭೂಮಿಯಲ್ಲೆಲ್ಲ ನನ್ನ ಭಕ್ತಿ ಬಯಲಾಯಿತು. ಈ ಭಕ್ತಿ ನನಗೆ ಸಮಸ್ಯೆಯನ್ನೇ ತಂದೊಡ್ಡಿತು ಎಂದು ನೊಂದುಕೊಳ್ಳುತ್ತಾ ಕತ್ತಿಯಿಂದ ಕೊರಳನ್ನು ಕತ್ತರಿಸಿಕೊಳ್ಳಲು ಮುಂದಾಗುತ್ತಾನೆ. ಆಗ ಪ್ರತ್ಯಕ್ಷನಾದ ಶಿವ ಅವನನ್ನು ಸಮಾಧಾನಿಸುತ್ತಾ ಪರಿಣಾಮ ಅರಿಯದೇ ಮಾಡಿದ ಕಾರ್ಯಕ್ಕಾಗಿ ಕ್ಷಮೆಯಿರಲಿ ಎಂದು ಚೆನ್ನನಲ್ಲಿ ಹೇಳುತ್ತಾ ಹೂಮಳೆ, ದುಂದುಭಿ ಮೊಳಗುತ್ತಿರುವಂತೆ ಆತನನ್ನು ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿಕೊಂಡು ಕೈಲಾಸವನ್ನು ಪ್ರವೇಶಿಸಿ ಪಾರ್ವತಿಗೆ ಸಂತೋಷದಿಂದ ಚೆನ್ನನನ್ನು ತೋರಿಸುತ್ತಾ, ಚೆನ್ನನಿಗೆ ಗಣಪದವಿಯನ್ನು ನೀಡುತ್ತಾನೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads