ಆಂಗ್ಲೋ-ಮರಾಠ ಯುದ್ಧಗಳು ಸಂಪೂರ್ಣ ಮಾಹಿತಿ Anglo-Maratha Yuddhagalu Complete Information in Kannada
ಮೊದಲ ಆಂಗ್ಲೋ-ಮರಾಠ ಯುದ್ಧ (1775-1782): The First Anglo-Maratha War
ಬಕ್ಸಾರ್ ಕದನದಲ್ಲಿ ಸೋತು ಬ್ರಿಟಿಷರ ಆಶ್ರಯದಲ್ಲಿದ್ದ ಮೊಗಲ್ ಚಕ್ರವರ್ತಿ ಎರಡನೇ ಷಾ ಆಲಂನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದಲ್ಲಿ ಕುಳ್ಳಿರಿಸಿದರು. ಚಕ್ರವರ್ತಿಯು ಮೊದಲು ಬ್ರಿಟಿಷರಿಗೆ ನೀಡಿದ್ದ ಕೋರ ಮತ್ತು ಅಲಹಾಬಾದ್‌ಗಳನ್ನು ಮರಾಠರಿಗೆ ಕೊಟ್ಟನು. ಇದರಿಂದ ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವವು ಮನೆಮಾಡಿತು. ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್ ಇದೇ ಸಮಯದಲ್ಲಿ ತೀರಿಕೊಂಡದ್ದು ಮರಾಠರಿಗೆ ತುಂಬಲಾರದ ನಷ್ಟವಾಯಿತು. ಪೇಶ್ವೆಯ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನನ್ನು ಅವನ ಚಿಕ್ಕಪ್ಪ ರಘೋಬ (ರಘುನಾಥರಾವ್) ನು ಕೊಲೆ ಮಾಡಿದನು. ಇದರಿಂದ ಪೇಶ್ವೆಯ ಸ್ಥಾನಕ್ಕೆ ಕಲಹ ಏರ್ಪಟ್ಟಿತು. ನಾನಾ ಫಡ್ನವೀಸ್ ನೇತೃತ್ವದಲ್ಲಿ ಪೇಶ್ವೆ ಸ್ಥಾನಾಕಾಂಕ್ಷಿಯಾದ ರಘೋಬನ ಬದಲು ನಾರಾಯಣರಾಯನ ಮಗ ಎರಡನೇ ಮಾಧವರಾವ್‌ಗೆ ಮರಾಠ ಒಕ್ಕೂಟವು ಪಟ್ಟಕಟ್ಟಿತು. ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗದ ರಘೋಬನು ಬ್ರಿಟಿಷರ ಬೆಂಬಲ ಕೋರಿದನು. ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯೋಚಿಸಿದರು. ಬ್ರಿಟಿಷರು ಮತ್ತು ಮರಾಠ ಒಕ್ಕೂಟಗಳ ನಡುವೆ 1775-1782ರವರೆಗೆ ನಡೆದ ದೀರ್ಘ ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರೂ, ಅಂತಿಮವಾಗಿ ಅಹಮದಾಬಾದ್‌ಅನ್ನು ಕಳೆದುಕೊಂಡರು. ಮರಾಠ ಒಕ್ಕೂಟವು ಯುದ್ಧ ಮುಂದುವರೆಸಲಾಗದೆ ಬ್ರಿಟಿಷರೊಂದಿಗೆ ಸಾಲ್‌ಬಾಯ್ ಒಪ್ಪಂದವನ್ನು ಮಾಡಿಕೊಂಡಿತು. ಎರಡನೇ ಮಾಧವರಾವನನ್ನು ಪೇಶ್ವೆಯಾಗಿ ನೇಮಿಸಲಾಯಿತು.
ಲಾರ್ಡ್ ವೆಲ್ಲೆಸ್ಲಿ (1798-1805) ಮತ್ತು ಸಹಾಯಕ ಸೈನ್ಯ ಪದ್ಧತಿ Lord Wellesley and His Auxiliary Army System:
ಲಾರ್ಡ್ ವೆಲ್ಲೆಸ್ಲಿಯು ಗವರ್ನರ್ ಜನರಲ್ ಆಗಿ ಬಂದ ನಂತರ ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯ, ವಿಸ್ತರಣೆಯು ದೊಡ್ಡ ಪ್ರಮಾಣದಲ್ಲಾಯಿತು. ಇವನ ಆಗಮನದ ಹೊತ್ತಿಗೆ ಬಲಿಷ್ಠ ಮರಾಠ ಮತ್ತು ಮೈಸೂರು ರಾಜ್ಯಗಳು ದುರ್ಬಲಗೊಂಡಿದ್ದು ವಿಸ್ತರಣಾ ನೀತಿಗೆ ಅನುಕೂಲಕರವಾಗಿತ್ತು. ಈ ಗುರಿಯನ್ನು ಸಾಧಿಸಲು ಅವನು ಮೂರು ವಿಧಾನಗಳನ್ನು ಅನುಸರಿಸಿದನು.
ಅವುಗಳೆಂದರೆ:
- ಸಹಾಯಕ ಸೈನ್ಯ ಪದ್ಧತಿ,
- ಹೊಸ ರಾಜ್ಯಗಳ ಮೇಲೆ ಯುದ್ಧಗಳು ಮತ್ತು
- ಈಗಾಗಲೇ ಕಂಪನಿಯ ಅಧೀನಕ್ಕೆ ಒಳಪ್ಪಟ್ಟಿರುವ ರಾಜ್ಯಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವುದು.
ಸಹಾಯಕ ಸೈನ್ಯ ಪದ್ಧತಿ ಎಂದರೇನು :
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ಸಹಾಯಕ ಸೈನ ಎಂಬ ನೀತಿಯನ್ನು ವೆಲ್ಲೆಸ್ಲಿಯು 1798ರಲ್ಲಿ ಜಾರಿಗೆ ತಂದನು. ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿದೆ.
ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳು:
- ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.
- ಸೇನೆಯ ವೇತನ ಮತ್ತು ನಿರ್ವಹಣೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು. ಇಲ್ಲವೆ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟುಕೊಡಬೇಕು.
- ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟನನ್ನು ನೇಮಿಸಿಕೊಳ್ಳಬೇಕು.
- ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.
- ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್‌ನ ಸಮ್ಮತಿ ಬೇಕು.
- ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.
ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ಸಂಸ್ಥಾನ ಅಥವಾ ಮೊದಲ ರಾಜ್ಯ:
ಈ ನೀತಿಯಿಂದ ಬ್ರಿಟಿಷರ ಸೈನಿಕ ನಿರ್ವಹಣೆ ಸುಲಭವಾಯಿತು ಮತ್ತು ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು. ಭಾರತೀಯ ರಾಜ್ಯಗಳನ್ನು ಆರ್ಥಿಕವಾಗಿ ತೀವ್ರ ಶೋಷಣೆಗೆ ಗುರಿಪಡಿಸಲಾಯಿತು. ಈ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ರಾಜ್ಯ ಹೈದರಾಬಾದ್ ಸಂಸ್ಥಾನ. ಅನಂತರ ಮೈಸೂರು, ಔದ್, ತಂಜಾವೂರು, ಮರಾಠ, ಆರ್ಕಾಟ್, ಪೂನಾ, ಬಿರಾರ್, ಗ್ವಾಲಿಯರ್ ಮೊದಲಾದ ರಾಜ್ಯಗಳು ಈ ಒಪ್ಪಂದಕ್ಕೆ ಒಳಪಟ್ಟವು.
ಎರಡನೇ ಆಂಗ್ಲೋ-ಮರಾಠ ಯುದ್ಧ (1803-1805): The Second Anglo- Maratha War:
ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಈ ಯುದ್ಧಕ್ಕೆ ಕಾರಣವಾಯಿತು. ಹೋಳ್ಕರ್ ಮನೆತನದ ಯಶವಂತರಾವ್ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್ ರಾವ್ ಹಾಗೂ ಪೇಳ್ವೆ ಎರಡನೇ ಬಾಜಿರಾವ್ ಇನ್ನೊಂದು ಕಡೆಗಿದ್ದರು. 1802 ರಲ್ಲಿ ಹೋಲ್ಕರ್ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆಯ ಸೈನ್ಯವನ್ನು ಸೋಲಿಸಿತು. ಪೇಶ್ವೆ ಬ್ರಿಟಿಷರ ಸಹಾಯ ಯಾಚಿಸಿದನು. ಲಾರ್ಡ್ ವೆಲ್ಲೆಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು. ಪೇಶ್ವೆಯು ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು. ಪೇಶ್ವೆಯು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಳ್ಕರ್, ಭೋಂಸ್ಲೆ, ಸಿಂಧಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದರು.
1803-1805 ರವರೆಗೆ ಮರಾಠ ಮನೆತನಗಳ ಸೇನೆಯನ್ನು ವೆಲ್ಲೆಸ್ಲಿಯು ಅನೇಕ ಯುದ್ಧಗಳಲ್ಲಿ ಮಣಿಸಿದನು. ಆದರೆ ಅವನ ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು. ಇದರಿಂದ ತೀವ್ರ ಟೀಕೆಗೆ ಒಳಗಾದ ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜಿನಾಮೆ ನೀಡಿ ಸ್ವದೇಶಕ್ಕೆ ಮರಳಿದನು. ಇದರಿಂದ ಆ ಪ್ರದೇಶದಲ್ಲಿ ತಾತ್ಕಾಲಿಕ ಶಾಂತಿ ನೆಲೆಸಿತು.
ಮೂರನೇ ಆಂಗ್ಲೋ-ಮರಾಠ ಯುದ್ಧ (1817-1818): The Third Anglo -Maratha War:
ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು. ಪೇಶ್ವ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಹವಣಿಸುತ್ತಿದ್ದನು. 1817ರಲ್ಲಿ ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು. ನಾಗಪುರದ ಅಪ್ಪಾಸಾಹೇಬ ಮತ್ತು ಮಲ್ಲಾರರಾವ್ ಹೋಳ್ಕರ್ ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು. ಅಂತಿಮವಾಗಿ ಪೇಶ್ವ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧ 1818ರಲ್ಲಿ ಕೋರೇಗಾವ್ ಮತ್ತು ಅಷ್ಟಿ ಯುದ್ಧಗಳಲ್ಲಿ ಸೋತು ಶರಣಾದನು. ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು. ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪಸಿಂಹನನ್ನು ಸಣ್ಣ ರಾಜ್ಯ ಸತಾರಾದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಕ ಮುಖಂಡನಾಗಿಸುವ ಮೂಲಕ ಮರಾಠರ ಪ್ರತಿರೋಧವನ್ನು ನಿಗ್ರಹಿಸಿದರು.
No comments:
Post a Comment
If you have any doubts please let me know