ಅಂತಾರಾಷ್ಟ್ರೀಯ ನೃತ್ಯ ದಿನ: ಏಪ್ರೀಲ್ 29 ಅಂತಾರಾಷ್ಟ್ರೀಯ ನೃತ್ಯ ದಿನ: ಏಪ್ರೀಲ್ 29 ಸಂಪೂರ್ಣ ಮಾಹಿತಿ ಹಾಗೂ ಭಾರತದ ನಾಟ್ಯ ಪ್ರಕಾರಗಳು
1982ರ ಲ್ಲಿ ಅಂತರರಾಷ್ಟ್ರೀಯ ನೃತ್ಯ ಸಂಸ್ಥೆ (ಐಟಿಐ) ಪ್ರತಿ ವರ್ಷ ಏಪ್ರೀಲ್ 29 ಅನ್ನು ಅಂತರರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆಧುನಿಕ ನೃತ್ಯ ಪ್ರಕಾರವನ್ನು ಜಗತ್ತಿಗೆ ಪರಿಚಯಿಸಿದ ಜೀನ್ ಜಾರ್ಜ್‌ನೊವರೆ (1727-1810) ಅವರ ಸವಿನೆಪಿಗಾಗಿ ವಿಶ್ವದ ಸರ್ವ ನೃತ್ಯ ಪ್ರೇಮಿಗಳಿಂದ ಈ ದಿನವನ್ನು ಸಂಭ್ರಮಿಸಲು ನಿರ್ಧರಿಸಲಾಯಿತು.
ಅಂತರರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಉದ್ದೇಶ ಮುಖ್ಯವಾಗಿ ಜಗತ್ತಿನ ಎಲ್ಲಾ ರಾಜಕೀಯ, ಸಂಸ್ಕೃತಿ ಮತ್ತು ಸಂಪ್ರದಾಯಿಕ ಕಲಾಪ್ರಕಾರಗಳನ್ನು ಮೀರಿದ ಪ್ರೀತಿಯೊಂದು ಜನಮಾನಸದಲ್ಲಿ ಹರಡಲು ನೃತ್ಯವೊಂದೇ ಇರುವ ಉಪಾಯ ಮತ್ತು ಪರಿಹಾರ ಎಂದು ಅರಿತ ಕಲಾಪ್ರೇಮಿಗಳು ನೃತ್ಯದಿಂದ ನಮ್ಮ ನಡುವೆ ಹುದುಗಿ ಹೋಗಿರುವ ಕಂದಕಗಳನ್ನು ಸಂಪೂರ್ಣ ಅಳಿಸಿ ಒಂದು ಸುಂದರ ಅನುಭೂತಿಯನ್ನು ಪಡೆಯುವುದಕ್ಕಾಗಿ ಮಾಡಿದ ವ್ಯವಸ್ಥೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.
ಐದನೇ ವೇದ-ನಾಟ್ಯ
ಬಹಳ ಜನರ ಅಭಿಪ್ರಾಯದ ಪ್ರಕಾರ, ನಾಟ್ಯ ವೇದ ಮೂಲಭೂತವಾಗಿ ಇತರ ನಾಲ್ಕು ವೇದಗಳಿಂದ ಪ್ರೇರಣೆ ಹೊಂದಿದ್ದು, ಐದನೇ ವೇದ ಆಗಿದೆ ಎಂದು. ಈ ಜ್ಞಾನ ಮತ್ತು ಕಲೆಯನ್ನು ಭರತಮುನಿಗಳು ಮನುಕುಲಕ್ಕೆ ನೀಡಿದರು ಎಂದು ನಂಬಲಾಗಿದೆ. ನೃತ್ಯದ ಮೂಲಕ ದೈವಿಕ ಆರಾಧನೆಯ ತತ್ವಗಳನ್ನು ತಿಳಿಸಲಾಗಿದೆ. ನೃತ್ಯವೂ ಕೂಡ ಒಂದು ಬಗೆಯ ಪೂಜಾ-ಪ್ರಾರ್ಥನೆಯಾಗಿದ್ದು, ದೇವಾಲಯಗಳ ಶಿಲ್ಪಕಲೆಗೆ- ಶಿಲ್ಪಿಗಳಿಗೆ ಸ್ಫೂರ್ತಿಯಾಗಿದೆ. ಶತಮಾನಗಳ ಹಿಂದೆ ದೇವರಿಗೇ ಎಂದು ಮೀಸಲಾಗಿರುತ್ತಿದ್ದ ಅತ್ಯಂತ ಗೌರವಾನ್ವಿತ ದೇವದಾಸಿಗಳು ಶಾಸ್ತ್ರೀಯ ನೃತ್ಯಗಳಿಂದ ದೇವರನ್ನು ಆರಾಧಿಸಿ ದೇವಾಲಯದ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದರು. ಅನೇಕ ರಾಜರು ನರ್ತಕಿಯರಿಗೆ ವಸತಿ ಮತ್ತು ಸೌಲಭ್ಯಗಳನ್ನು ನೀಡಿ, ನೃತ್ಯ ಕಲೆಯನ್ನು ಪ್ರೋತ್ಸಾಹಿಸಿ ನೃತ್ಯ ಕಲೆಗೆಂದೇ ಸಂಗೀತ ಸಂಯೋಜನೆಯನ್ನು ಮಾಡಿಸುತ್ತಿದ್ದರು.
ಪಶ್ಚಿಮ ತತ್ವ ಸಿದ್ಧಾಂತಗಳು ನಮ್ಮ ಸಂಸ್ಕೃತಿ ಮತ್ತು ಆಚರಣೆಗಳನ್ನು ಹೀಯಾಳಿಸಿ, ದಾಸಿಗಳು ಆಚರಿಸುತ್ತಿದ್ದ ಶಾಸ್ತ್ರೀಯ ನೃತ್ಯವನ್ನು ಅವಮಾನಿಸಿದ್ದರೂ ಕೂಡ ಭಾರತದಲ್ಲಿ ಇಂದಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಅದೃಷ್ಟವಶಾತ್, 20ನೇ ಶತಮಾನದಲ್ಲಿ ಶಾಸ್ತ್ರೀಯ ನೃತ್ಯಗಳು ಸಕ್ರಿಯ ಪುನರುಜ್ಜಿವನ್ನು ಕಂಡಿತು. ಜನಸಾಮಾನ್ಯರಿಂದ ಮೆಚ್ಚುಗೆ ಪಡೆಯಿತು. ಸದಿರ್ (ದಾಸಿ ಅಟ್ಟಂ) ಅನ್ನು ವ್ಯವಸ್ಥಿತವಾಗಿ ಭರತನಾಟ್ಯ ಮಾಡಲಾಯಿತು.
ಒಡಿಸ್ಸಿಯೊಂದಿಗ ಗೊಟಿಪುವ, ಮೋಹಿನಿ ಅಟ್ಟಂ ಮತ್ತು ಕಥಕಳಿ ಇವೆಲ್ಲವು ಪುನಶ್ವೇತನಗೊಂಡಿತು. ಈ ಬಗೆಬಗೆಯ ನೃತ್ಯ ಶೈಲಿಗಳು ದೇವಾಲಯಗಳಿಂದ ಹೊರ ಬಂದು, ರಾಜರ ಆಸ್ಥಾನ ಸೇರಿ, ಇಂದಿನ ಅದ್ದೂರಿ ರಂಗಮಂಚಗಳವರೆಗೂ ಬರುವಲ್ಲಿ ರೂಪಾಂತರಕಂಡಿದ್ದರೂ ಪರಮಸತ್ವಗಳಲ್ಲಿ ಬದಲಾಗಿಲ್ಲ. ನೃತ್ಯ ಸಾಧನೆಗಳಲ್ಲಿ ತೊಡಗುವವರು ಆಧ್ಯಾತ್ಮಿಕವಾಗಿ ಕಲೆಯಲ್ಲಿ ಅಡಕವಾಗಿ ಪರಿಣಿತಿಯನ್ನು ಹೊಂದಲು ದಶಕಗಳು ಬೇಕಾಗಬಹುದು.
ಏಪ್ರಿಲ್ 29 ದಿನವಾದ ಇಂದು ವಿಶ್ವ ನೃತ್ಯ ದಿನ. ಯುನೆಸ್ಕೋದ ಅಂಗವಾದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಥಿಯೇಟರ್ಸ್ ನೃತ್ಯ ಸಮಿತಿಯು 1982 ರಲ್ಲಿ ಅಂತರರಾಷ್ಟ್ರೀಯ ನೃತ್ಯ ದಿನ ಆಚರಣೆಯನ್ನು ಜಾರಿಗೆ ತರಲು ನಿರ್ಧರಿಸಿತು. ಫ್ರಾನ್ಸಿನ ಪ್ರಸಿದ್ಧ ನೃತ್ಯ ಕಲಾವಿದ ಜೀನ್ ಜಾರ್ಜ್ ನೊವೇರೆ ಅವರು 1727ರ ಏಪ್ರಿಲ್ 29ರಂದು ಜನಿಸಿದ ಹಿನ್ನೆಲೆಯಲ್ಲಿ ವಿಶ್ವ ನೃತ್ಯ ಕಲೆಗೆ ಗೌರವಪೂರ್ವಕವಾಗಿ ಈ ದಿನದ ಸಂಭ್ರಮಾಚರಣೆ ಜಾರಿಗೆ ಬಂತು.
ಜೀನ್ ಜಾರ್ಜ್ ನೊವೇರೆ ಬ್ಯಾಲೆಗೆ ಹೊಸ ಅಯಾಮ ನೀಡಿದವರು. ಇವರು ಸಾಂಪ್ರದಾಯಿಕವಾಗಿ ಪ್ರದರ್ಶಿತವಾಗುತ್ತಿದ್ದ ಬ್ಯಾಲೆ ಪದ್ಧತಿಯನ್ನು ಶಾಸ್ತ್ರೀಯವಾಗಿ ವಿಮರ್ಶೆಗೆ ಒಳಪಡಿಸಿದರು. ಅಲ್ಲಿಂದ ಮುಂದೆ, ಶರೀರದ ಅಂಗಾಗಗಳು ಮತ್ತು ಮುಖ ಭಾವಗಳ ಮೂಲಕ ರಸಭಾವಗಳನ್ನು ಪ್ರದರ್ಶಿಸುವ ಪದ್ಧತಿ ಹೆಚ್ಚಾಗಿ ಬಳಕೆಗೆ ಬಂದು, ಕೌಶಲದ ಕಡೆಗೆ ಹೆಚ್ಚಿನ ಕೃಷಿ ನಡೆಯತೊಡಗಿತು. ನೊವೇರೆ ಅವರಿಂದ ನೃತ್ಯಾಭಿನಯಗಳ ಮೂಲಕ ಕಥೆಯನ್ನು ಮುನ್ನಡೆಸುವಲ್ಲಿಯೂ ಹೊಸತನ ರೂಢಿಗೆ ಬಂದಿತು. 18ನೇ ಶತಮಾನದ ಕೊನೆಯಲ್ಲಿ, ಅವರು ನೃತ್ಯ ಸಂಯೋಜನೆ ಕ್ಷೇತ್ರದಲ್ಲಿ ಎಲ್ಲಾ ಕೌಶಲ್ಯ ಮತ್ತು ಅನುಭವಗಳನ್ನು ಸಂಕ್ಷಿಪ್ತಗೊಳಿಸಿದರು ಮತ್ತು ತಜ್ಞರಲ್ಲಿ ಜನಪ್ರಿಯವಾದ “ಲೆಟರ್ಸ್ ಆನ್ ಡ್ಯಾನ್ಸಿಂಗ್ ಅಂಡ್ ಬ್ಯಾಲೆಟ್” ಕೃತಿಯಲ್ಲಿ ಅದರ ಪ್ರಮುಖ ಲಕ್ಷಣಗಳನ್ನು ಗಮನಿಸಿದರು.
ಕಲೆಯನ್ನು ವಿಶ್ವವೇ ಒಂದು ಆಚರಣೆಯಾಗಿ ಸಂಭ್ರಮಿಸುವುದು ಸಂತಸದ ವಿಚಾರ.
ಭಾರತದಲ್ಲಿ ನಾಟ್ಯನರ್ತನಾದಿ ಕಲೆಗಳಿಗೆ ಸುಮಾರು 4000 ವರ್ಷಗಳ ದೀರ್ಘ ಪರಂಪರೆಯಿದೆ. ಋಗ್ವೇದದಲ್ಲಿ ನೃತ್ಯದ ಪ್ರಸಕ್ತಿಯಿದೆ. ಪಗಡೆ ದಾಳಗಳೊಂದಿಗೆ ಅಪ್ಸರೆಯರು ನೃತ್ಯಮಾಡಿದರೆಂಬ ವರ್ಣನೆ ಅಥರ್ವಣ ವೇದದಲ್ಲಿ ಉಂಟು. ಪಾಣಿನಿಯ ಅಷ್ಟಾಧ್ಯಾಯೀ ಮತ್ತು ಪತಂಜಲಿಯ ಮಹಾಭಾಷ್ಯ ಗ್ರಂಥಗಳಲ್ಲಿ ನಾಟ್ಯದ ಪ್ರಸ್ತಾಪವಿದೆ. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲಿ ನರ್ತನದ ವಿವರಗಳಿವೆ. ಕಾಳಿದಾಸಾದಿ ನಾಟಕಕಾರರ ಕೃತಿಗಳಲ್ಲಿ ನೃತ್ಯಕ್ಕೆ ಸಂಬಂಧಪಟ್ಟ ವಿಪುಲ ವಿವರಗಳು ದೊರಕುತ್ತವೆ.
ಭಾರತದಲ್ಲಿ ನಾಟ್ಯದ ವಿವರಣೆಯನ್ನೇ ಪ್ರಧಾನ ವಿಷಯವಾಗಿಸಿಕೊಂಡ ಅನೇಕ ಗ್ರಂಥಗಳು ರಚನೆಗೊಂಡಿವೆ. ಅವುಗಳ ಪೈಕಿ ಭರತನ ನಾಟ್ಯಶಾಸ್ತ್ರ ಒಂದು ವಿಶಿಷ್ಟ ಕೃತಿ. ನಂದಿಕೇಶ್ವರನ ಅಭಿನಯದರ್ಪಣ ಇಂಥದೇ ಇನ್ನೊಂದು ಗ್ರಂಥ. ವಿಷ್ಣುಧರ್ಮೋತ್ತರ ಪುರಾಣ, ಮಾನಸೋಲ್ಲಾಸ, ಶಿವತತ್ತ್ವರತ್ನಾಕರ ಮೊದಲಾದ ವಿಶ್ವಕೋಶ ರೂಪದ ಗ್ರಂಥಗಳಲ್ಲಿ ನಾಟ್ಯದ ವಿವರಗಳಿವೆ. ಶಾಙ್ರ್ಗಧರನ ಸಂಗೀತ ರತ್ನಾಕರ ಎಂಬ ಗ್ರಂಥದಲ್ಲಿ ನಾಟ್ಯದ ವಿವರಣೆಗೆಂದೇ ಒಂದು ಅಧ್ಯಾಯವನ್ನು ಮೀಸಲಿಡಲಾಗಿದೆ. ಈ ಎಲ್ಲ ಕೃತಿಗಳು ಭರತಖಂಡದಲ್ಲಿ ಪ್ರಚಲಿತವಿದ್ದ ನೃತ್ಯಕಲೆಯ ವೈಶಿಷ್ಟ್ಯಗಳನ್ನೂ ಅದರ ರೂಪರೇಷೆಗಳನ್ನೂ ಸಮಗ್ರವಾಗಿ ವಿವರಿಸುವ ಆಕರ ಗ್ರಂಥಗಳಾಗಿವೆ.
ಭಾವತಾಳಲಯ ಯುಕ್ತವಾದ ಅಭಿನಯವೇ ನೃತ್ಯ. ನೃತ್ಯದಲ್ಲಿ ಲಾಸ್ಯ, ತಾಂಡವ ಎಂದು ಎರಡು ಬಗೆ. ಉದ್ಧತ ನೃತ್ಯವೇ ತಾಂಡವ; ಸುಕುಮಾರ ನೃತ್ಯವೇ ಲಾಸ್ಯ. ಪುರುಷ ಕರ್ತೃಕವಾದ ಉದ್ದತ ನೃತ್ಯವನ್ನು ತಾಂಡವವೆಂದೂ ಸ್ತ್ರೀಕರ್ತೃಕವಾದ ಲಾವಣ್ಯಯುಕ್ತ ನೃತ್ಯವನ್ನು ಲಾಸ್ಯವೆಂದೂ ಕರೆಯಲಾಗುತ್ತದೆ. ನೃತ್ಯದಲ್ಲಿ ಮಾರ್ಗ-ದೇಸಿ ಎಂಬ ಎರಡು ಪ್ರಭೇದಗಳಿವೆ. ಪರಂಪರೆಯಿಂದ ಕಾಲದೇಶ ಬದ್ಧವಾಗಿ ಉಳಿದು ಬಂದದ್ದು ದೇಸಿ ಅಥವಾ ಜನಪದವಾದರೆ ಸಂಪ್ರದಾಯಬದ್ದ ಮತ್ತು ಶಾಸ್ತ್ರಪ್ರಣೀತವಾದದ್ದು ಮಾರ್ಗ. ಭಾರತದಲ್ಲಿ ಈ ಎರಡೂ ವರ್ಗದ ಅನೇಕ ನೃತ್ಯಗಳು ಪ್ರಚಲಿತವಿವೆ.
ಶಾಸ್ತ್ರೀಯ ನೃತ್ಯಗಳಲ್ಲಿ ಕಥಕ್, ಕಥಕಳಿ, ಕೂಚಿಪುಡಿ, ಭರತನಾಟ್ಯ, ಮಣಿಪುರಿ, ಒಡಿಸಿ ಮುಂತಾದ ಹಲವು ಪ್ರಕಾರಗಳು ಭಾರತದಲ್ಲಿ ಪ್ರಖ್ಯಾತಿ ಪಡೆದಿವೆ.
ಭರತನಾಟ್ಯ:
ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಪ್ರಚಲಿತವಿರುವ ನೃತ್ಯ ಪದ್ದತಿ. ಇದರಲ್ಲಿ ನೃತ್ತ, ನೃತ್ಯ, ನಾಟ್ಯ ಎಂದು ಮೂರು ವಿಭಾಗಗಳಿವೆ. ಸಭಾ ಕಲಾಪದ ಅನುಕ್ರಮ ಸ್ಥೂಲವಾಗಿ ಹೀಗಿರುತ್ತದೆ; ಪೂರ್ವಾರ್ಧದಲ್ಲಿ ಅಲರಿಪು, ಜತಿಸ್ವರ ಶಬ್ದ, ಪರವರ್ಣ-ಸ್ವರಜತಿವರ್ಣ, ಉತ್ತರಾರ್ಧದಲ್ಲಿ ಪದ, ಜಾವಳಿ, ದುರುಶ್ಲೋಕ-ಪದ-ಚೂರ್ಣಿಕೆ, ಅಷ್ಟಪದಿ-ದಶಾವತಾರ, ತಿಲ್ಲಾನ.
ಕಥಕ್:
ನೃತ್ಯ ಪ್ರಕಾರ ರಾಜಸ್ಥಾನ, ಉತ್ತರಪ್ರದೇಶ ಮೊದಲಾದ ಕಡೆಗಳಲ್ಲಿ ಪ್ರಚಲಿತವಿದೆ. ಇದು ಲಾಸ್ಯಪ್ರಧಾನ ನೃತ್ಯ. ಪೌರಾಣಿಕ ಕಥೆಗಳನ್ನು ಅದರಲ್ಲಿಯೂ ವಿಶೇಷವಾಗಿ ಕೃಷ್ಣಕಥೆಗಳನ್ನು. ಅಭಿನಯಿಸುತ್ತಿದ್ದುದರಿಂದ ನೃತ್ಯಕ್ಕೆ ಈ ಹೆಸರು ಬಂತೆಂಬ ಅಭಿಪ್ರಾಯವಿದೆ. ನೃತ್ಯಕಲಿಸುವ ಉಪಾಧ್ಯಾಯರನ್ನು ಕಥಕ ಅಥವಾ ಕಥಿಕ ಎನ್ನುತ್ತಾರೆ. ಮುಸ್ಲಿಂ ಸಂಸ್ಕೃತಿಯ ಪ್ರಭಾವ ಒತ್ತಡಗಳಿಂದಾಗಿ ಈ ನೃತ್ಯದಲ್ಲಿ ಅನೇಕ ಮಾರ್ಪಾಡುಗಳುಂಟಾದುವು. ಧಾರ್ಮಿಕತೆ, ನೀತಿ ಬೋಧೆಯ ಉದ್ದೇಶ ಗೌಣವಾಗಿ ಅಮೋದ, ಶೃಂಗಾರ ಹೆಚ್ಚಾದುವು. ಭರತನಾಟ್ಯದಲ್ಲಿರುವಂತೆಯೇ ಇಲ್ಲಿಯೂ ನೃತ್ತ. ನೃತ್ಯ, ನಾಟ್ಯಗಳೆಂಬ ವಿಭಾಗಗಳಿವೆ. ಇತರ ನೃತ್ಯ ಪ್ರಕಾರಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುವ ಚಕ್ಕರ್ (ಪರಿಭ್ರಮಣ) ಕಥಕ್‍ನಲ್ಲಿ ಹೇರಳವಾಗಿ ಕಾಣಿಸಿಕೊಳ್ಳುತ್ತದೆ.
ಕಥಕಳಿ:
ಕೇರಳದಲ್ಲಿ ಪ್ರಚಲಿತವಿರುವ ಪ್ರಸಿದ್ಧ ನೃತ್ಯ ಪ್ರಕಾರ. ಕೇರಳದಲ್ಲಿ ಮಧ್ಯಯುಗದಲ್ಲಿ ಪ್ರಚಲಿತವಿದ್ದ ಕೃಷ್ಣನಾಟ್ಟಂ ಅನಂತರ ಸುಮಾರು 17ನೆಯ ಶತಮಾನದಲ್ಲಿ ಹುಟ್ಟಿಕೊಂಡ ರಾಮನಾಟ್ಟಂ ನಾಟ್ಯ ಸಂಪ್ರದಾಯಗಳು ಕಾಲ ಕ್ರಮೇಣ ಅಟ್ಟಕಥಾ ಎಂದಾಗಿ ಕಳೆದ ಮೂರು ಶತಮಾನಗಳಿಂದ ಕಥಕಳಿ ಎಂಬ ಹೆಸರಿನಿಂದ ಖ್ಯಾತವಾಯಿತೆಂದು ಪ್ರತೀತಿ. ಕಥಕಳಿ ಸಾಂಘಿಕ ನೃತ್ಯ; ವೀರರಸ ಪ್ರಧಾನವಾದುದು. ಆಡುವ ಪ್ರಸಂಗಗಳು ಹೆಚ್ಚಾಗಿ ರಾಮಾಯಣ ಮಹಾಭಾರತ ಪುರಾಣಾದಿ ಪುಣ್ಯಕಥೆಗಳಾಗಿರುತ್ತವೆ. ನೃತ್ಯ ನಿರೂಪಣೆ ಎಂಟು ವಿಭಾಗಗಳಿಂದ ಕೂಡಿರುತ್ತದೆ. ಈ ವಿಭಾಗಳನ್ನು ಚಡಂಙ ಎನ್ನುತ್ತಾರೆ, ಅವುಗಳೆಂದರೆ ಕೇಳಿ, ಅರಂಙುಕೇಳಿ ಅಥವಾ ಶುದ್ದ ಮದ್ದಳಮ್, ತೋಟಯಮ್, ವಂದನಾ ಶ್ಲೋಕಗಳು, ಪುರಪ್ಪಾಟ್, ಮೇಳಪ್ಪದಮ್, ಕಥಾಭಿನಯಮ್, ಧನಾಶಿ, ವೇಷಭೂಷಣ, ಬಣ್ಣಕಲೆ ಈ ನೃತ್ಯದಲ್ಲಿ ಎದ್ದು ಕಾಣುವ ಅಂಶಗಳು. ನೃತ್ಯದಂತೆಯೇ ಸಂಗೀತಕ್ಕೂ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕಂಡುಬರುತ್ತದೆ.
ಕೂಚಿಪುಡಿ:
ಆಂಧ್ರ ರಾಜ್ಯದ ತೆಲುಗು ಸೀಮೆಯಲ್ಲಿ ಪ್ರಚಲಿತವಿರುವ ನೃತ್ಯ ಪ್ರಕಾರ. ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನ ಕೂಚಿಪುಡಿ (ಕುಚೇಲಪುರ) ಇದರ ನೆಲೆ. ಇಲ್ಲಿ ಹುಟ್ಟಿ ಬೆಳೆದದ್ದರಿಂದ ನೃತ್ಯಕ್ಕೆ ಕೂಚಿಪುಡಿ ಎಂಬ ಹೆಸರು ಬಂತು. ಇದು ಏಕವ್ಯಕ್ತಿಯಿಂದಲೂ ಸಾಂಘಿಕವಾಗಿಯೂ ಪ್ರದರ್ಶಿಸಿಕೊಳ್ಳುವ ನೃತ್ಯಕಲೆ. ಸಂವಾದ ರೂಪದ ಕಥಾನಿರೂಪಣೆಯಿರುವುದರಿಂದ ನಾಟಕೀಯ ರಂಜನೆ ಈ ನೃತ್ಯಕ್ಕೆ ಒದಗಿದೆ. ಹಾಗಾಗಿ ಇದು ಜನಸಾಮಾನ್ಯರನ್ನು ತನ್ನತ್ತ ಆಕರ್ಷಿಸುವ ಗುಣ ಪಡೆದಿದೆ. ಭಾಮಾಕಲಾಪ, ಕೃಷ್ಣಾಲೀಲಾ ತರಂಗಿಣಿ ಪ್ರಹ್ಲಾದ ಚರಿತ್ರೆ, ಗೊಲ್ಲಕಲಾಪ, ಉಷಾಪರಿಣಯ -ಇಂಥ ನಾಟ್ಯ ರೂಪಕಗಳು ಕೂಚಿಪುಡಿಯನ್ನು ಜನಪ್ರಿಯಗೊಳಿಸಿವೆ.
ಮಣಿಪುರಿ:
ಮಣಿಪುರ ರಾಜ್ಯದಲ್ಲಿ ಪ್ರಚಲಿತವಿರುವ ನೃತ್ಯ ಪದ್ದತಿಯೇ ಮಣಿಪುರಿ. ಇದರಲ್ಲಿ ಲಾಯ್ ಹರೋಬಾ, ರಾಸಲೀಲಾ ಎಂಬ ಎರಡು ಪ್ರಭೇದಗಳುಂಟು. ಲಾಯ್ ಹರೋಬಾ ವಿಶೇಷವಾಗಿ ಶಿವ-ಪಾರ್ವತಿಯರ ಲೀಲಾ ವಿನೋದವನ್ನೂ ಜಗತ್ತಿನ ಸೃಷ್ಟಿಯನ್ನೂ ವಸ್ತುವಾಗುಳ್ಳ ನೃತ್ಯ. ರಾಸಲೀಲಾ ಕೃಷ್ಣ ಗೋಪಿಕೆಯರ ರಸಮಯ ವಿಲಾಸವನ್ನು ನಿರೂಪಿಸುವ ನೃತ್ಯ. ಋತುಮಾನಕ್ಕೆ ಅನುಗುಣವಾದ ವಸಂತರಾಸ್, ಕುಂಜರಾಸ್, ಝಾಲನ್ ಯಾತ್ರಾ ನೃತ್ಯಗಳು ರಂಜನೀಯವಾಗಿರುತ್ತವೆ. ಲಾಸ್ಯ ಹಾಗೂ ತಾಂಡವ ನೃತ್ಯಗಳ ವಿಲಾಸವನ್ನು ಮಣಿಪುರಿಯಲ್ಲಿ ಕಾಣಬಹುದಾಗಿದೆ.
ಒಡಿಸಿ:
ಒರಿಸ್ಸ ರಾಜ್ಯದಲ್ಲಿ ಪ್ರಚಲಿತವಿರುವ ನೃತ್ಯಪ್ರಕಾರ ಇದೊಂದು ಸ್ವತಂತ್ರ ನೃತ್ಯಪ್ರಕಾರ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಹಸ್ತಮುದ್ರೆಗಳು, ಭಂಗಿಗಳು, ಸ್ಥಾನಕಗಳು, ಭ್ರಮರಿಗಳು, ಚಾಲನಿಕಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಈ ನೃತ್ಯದಲ್ಲಿ ಕಾಣಬಹುದಾಗಿದೆ. ಈ ನೃತ್ಯ ಸಂಪ್ರದಾಯದ ಮೇಲೆ ಶೈವ, ವೈಷ್ಣವ, ಭೌದ್ಧ ಧರ್ಮಗಳ ಪ್ರಭಾವ ಗಾಢವಾಗಿ ಆಗಿರುವುದನ್ನು ಗುರುತಿಸಬಹುದಾಗಿದೆ.
ಜನಪದ ನೃತ್ಯಗಳು ಕೂಡಾ ಮಹತ್ವದ್ದು. ಮನುಷ್ಯನ ಬದುಕನ್ನು ತೀವ್ರ ಸಂವೇದನೆಗೊಳಗಾಗಿಸುವ ಹುಟ್ಟು, ಸಾವು ಮತ್ತು ಇವುಗಳ ನಡುವೆ ಅವನಿಗೆ ಉಂಟಾಗುವ ನಾನಾ ತರಹದ ಅನುಭವಗಳಿಗೆ ಒಂದು ಜನಾಂಗ ಚಲನೆಯ ಮೂಲಕ ವ್ಯಕ್ತಪಡಿಸುವ ಒಂದು ಪ್ರತಿಕ್ರಿಯೆಯಾಗಿ ನೃತ್ಯ ಹುಟ್ಟಿತೆನ್ನಬಹುದು. ಮೂಲಭೂತವಾಗಿ ಅದು ಅವನ ಅತೀವ ಆನಂದದ, ತೃಪ್ತಿಯ ಸರಳ ಅಭಿವ್ಯಕ್ತಿ. ಜನಾಂಗದ ಆಚರಣೆ, ಸಂಪ್ರದಾಯ, ನಂಬಿಕೆ, ಮೂಢನಂಬಿಕೆ, ವೃತ್ತಿ ಮುಂತಾದವನ್ನೂ ಅದು ಪ್ರತಿ ಬಿಂಬಿಸುತ್ತದೆ.
ಧಾರ್ಮಿಕ ನೃತ್ಯಗಳಿಗೆ ಭಾರತ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಬಂಗಾಳದ ಕಾಠೀ, ಹಿಮಾಚಲದ ಸಾಂಗಲ, ಕರ್ನಾಟಕದ ವೀರಗಾಸೆ ಕುಣಿತ, ಗೊರವರ (ಕಡಬಡ್ಡರ) ಕುಣಿತ, ಬೀಸುಕಂಸಾಳೆ ನೃತ್ಯ ಶೈವ ಸಂಬಂಧಿಯಾದದ್ದು. ಭಾರತದ ಸೌರಾಷ್ಟ್ರದಲ್ಲಿ ಟಿಪ್ಪನೀ ಎಂಬುದು ವೃತ್ತಿ ನೃತ್ಯಸಂಪ್ರದಾಯಕ್ಕೆ ಸೇರಿದುದಾಗಿದೆ. ಭಾರತದಲ್ಲಿ ಮಯೂರ ನೃತ್ಯ, ಸರ್ಪ ನೃತ್ಯ ಮುಂತಾದ ಪ್ರಕಾರಗಳೂ ಇವೆ. ಸೌರಾಷ್ಟ್ರದಲ್ಲಿರುವ ಸಿದ್ಧಿ ಎಂಬ ಜನಾಂಗ ಧಮಾಲ್ ಎಂಬ ಪಕ್ಷಿಪ್ರಾಣಿಗಳಿಗೆ ಸಂಬಂಧಿಸಿದ ನೃತ್ಯವನ್ನು ಅಭಿನಯಿಸುತ್ತಾರೆ. ಧಮಾಲ್‍ನಲ್ಲಿ ವಕ್ರವಕ್ರವಾದ ಚಲನೆಯೇ ಹೆಚ್ಚು. ಅವರು ಕೆಲವು ಪ್ರಾಣಿಗಳ ಮತ್ತು ಪಕ್ಷಿಗಳ ಚಲನೆ, ಭಂಗಿ ಮತ್ತು ಧ್ವನಿಯನ್ನು ಅನುಕರಿಸುತ್ತಾರೆ. ಭಾರತದಲ್ಲಿ ಪೊರೋಜ ಎಂಬ ಆದಿ ವಾಸಿಗಳು ಒಂದು ದೊಡ್ಡ ಸಾಲಿನಲ್ಲಿ ನಿಂತು ಒಂದು ದೊಡ್ಡ ಹಾವಿನಂತೆ ಚಲಿಸುತ್ತಾರೆ. ಬೇಟೆಗಾರರ ಮತ್ತು ಬೆಸ್ತರ ನೃತ್ಯಗಳು : ಪ್ರಾಣಿಗಳು ನಡೆಯುವುದು, ಬೇಟೆಗಾಗಿ ನಿರೀಕ್ಷಿಸುವುದು, ವೇಗವಾಗಿ ಬಂದು ಹಾರಿ ಪ್ರಾಣಿಗಳನ್ನು ಕೊಲ್ಲುವುದು-ಈ ಕ್ರಿಯೆಗಳನ್ನು ಈ ನೃತ್ಯಗಳು ಒಳಗೊಳ್ಳುತ್ತವೆ. ಕಚ್ವಿಘೋಡಿ ಎಂಬುದು ರಾಜಸ್ಥಾನದ ಗಂಡಸರು ಅಭಿನಯಿಸುವ ಒಂದು ನೃತ್ಯ. ಕೇರಳದ ನಾಯರ್ ಜನಾಂಗ ಅಭಿನಯಿಸುವ ವೆಳಕ್ಕಳಿ ಎಂಬ ನೃತ್ಯದಲ್ಲಿ ನೃತ್ಯಗಾರರು ಕತ್ತಿ ಮತ್ತು ಗುರಾಣಿಗಳನ್ನು ಬಳಸುತ್ತಾರೆ. ರಾಜಸ್ಥಾನದಲ್ಲಿ ತೇರತಾಲಿ ಎಂಬ ಹೆಂಗಸರ ನೃತ್ಯದಲ್ಲಿ ಕತ್ತಿಯ ಬಳಕೆ ಇದೆ. ಅವರು ಚಿಕ್ಕದಾದ ಒಂದು ಕತ್ತಿಯನ್ನು ಹಲ್ಲಿನಿಂದ ಕಚ್ಚಿಕೊಂಡು ಕುಣಿಯುತ್ತಾರೆ.
ಕರ್ನಾಟಕದ ಜನಪದ ನೃತ್ಯಗಳನ್ನು ಪ್ರಾದೇಶಿಕವಾಗಿ ಹೀಗೆ ವರ್ಗೀಕರಿಸಬಹುದು.
ಉತ್ತರ ಕರ್ನಾಟಕ; ಕರಡಿ ಮಜಲು, ಡೊಳ್ಳು ಕುಣಿತ, ಗೊಂದಲಿಗರ ಮೇಳ, ಕೋಲಾಟ. ಜೊಗಿತೀರ ಕುಣಿತ, ವಾಘೇ ಮುರುಳಿ, ಭೂತೇರು ಕುಣಿತ, ದಟ್ಟಿ ಕುಣಿತ, ಕೀಲು ಕುದುರೆ ನೃತ್ಯ.
ದಕ್ಷಿಣ ಕರ್ನಾಟಕ : ವೀರಗಾಸೆ ಕುಣಿತ, ಸೋಮನ ಕುಣಿತ, ಲಿಂಗದ ಬೀರರ ಕುಣಿತ, ಗುಡ್ಡರ ಕುಣಿತ, ರಂಗದ ಕುಣಿತ, ಗಾರುಡಿ ಕುಣಿತ, ಬೀಸು ಕಂಸಾಳೆ ಕುಣಿತ, ಭಾಗವಂತಿಗೆ ಮೇಳ, ಕರಪಾಲ ಮೇಳ, ಚೌಡಿಕೆ ಮೇಳ, ಪಟಕುಣಿತ, ಪೂಜಾಕುಣಿತ, ಚಿಟ್‍ಮೇಳ, ಗೊರವರ ಕುಣಿತ, ನಂದಿಕೋಲು ಕುಣಿತ, ಕೋಲಾಟ, ಈರಮಕ್ಕಳ ಕುಣಿತ, ಫಲಕದ ಕುಣಿತ, ಕಾಡೆಮ್ಮೆ ದೊಡ್ಡಿ ಕುಣಿತ, ಸೋಲಿಗ ಕುಣಿತ.
ಕೊಡಗು : ಹುತ್ತರಿ ಕುಣಿತ, ಬಳುಕಾಟ, ಉಮ್ಮತ್ತಾಟ, ಕೋಲಾಟ.
ದಕ್ಷಿಣ ಕನ್ನಡ ಜಿಲ್ಲೆ : ದುಡಿ ಕುಣಿತ, ಡೋಲಿನ ಕುಣಿತ, ವೈದ್ಯನೃತ್ಯ, ಭೂತನೃತ್ಯ, ಹೋಲಿನೃತ್ಯ, ಆಟಿಕೊಡೆಂಜ, ಕೋರತನಿಯ, ಕೋಲಾಟ.
ಉತ್ತರ ಕನ್ನಡ ಜಿಲ್ಲೆ : ಹಾಲಕ್ಕಿ ಗೌಡರ ಸುಗ್ಗಿ ಕುಣಿತ, ಕೋಲಾಟ, ಕರಡಿ ಕುಣಿತ, ಸಿಂಹ ನೃತ್ಯ, ಹೂವಿನ ಮಕ್ಕಳ ಕುಣಿತ, ಗುಮ್ಮಟೆ ವಾದ್ಯದೊಡನೆ ಕುಡುಬಿಗಳ ನೃತ್ಯ, ಸಿದ್ಧಿಯರ ನೃತ್ಯ.
ಸಾಹಿತ್ಯ ಪ್ರಧಾನವಾದ ಯಕ್ಷಗಾನ ಬಯಲಾಟಗಳಲ್ಲೂ ಕರಪಾಲಮೇಳ, ಚೌಡಿಕೆ ಮೇಳ, ಜೋಗಿಗಳ ಮೇಳ ಮುಂತಾದುವುಗಳಲ್ಲೂ ನೃತ್ಯ ಪ್ರಮುಖವಾಗಿಯೇ ಬರುತ್ತದೆ. ಉತ್ತರ ಕರ್ನಾಟಕದ ಗೊಂದಲಿಗರ ಮೇಳ ಕಥಾಪ್ರಧಾನವಾದುದು. ಕರಪಾಲ ಚೌಡಿಕೆಮೇಳಗಳಂತೆ ಸಾಹಿತ್ಯ, ಸಂಗೀತ, ಕುಣಿತಗಳು ಇಲ್ಲಿ ಮುಪ್ಪುರಿಗೊಂಡಿರುತ್ತವೆ. ಕಥಾನಿರೂಪಣೆ, ನಡುವೆ ಹಾಡು, ಕುಣಿತ, ಸಮಗ್ರರಾತ್ರಿ ಜನರ ಆಸಕ್ತಿಯನ್ನು ಹಿಡಿದಿಡಬೇಕಾದ ಹೊಣೆಗಾರಿಕೆ ಈ ಕಲೆಗಳದು. ಆದುದರಿಂದಲೇ ಕಥಾಮಾಧ್ಯಮ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇವಲ್ಲದೆ ಪಾಶ್ಚಾತ್ಯ ಪ್ರಭಾವದಿಂದ ಅನೇಕ ನೃತ್ಯಗಳು ಭಾರತದಲ್ಲಿ ಇಂದು ಸಮುದಾಯದ ಗಮನಸೆಳೆದಿವೆ. ಅಂಥವುಗಳ ಪೈಕಿ ಬ್ಯಾಲೆ, ಡಿಸ್ಕೊ, ರಾಕ್-ಎನ್-ರೋಲ್ ನೃತ್ಯಗಳನ್ನು ಹೆಸರಿಸಬಹುದು.
ನೃತ್ಯ ಕಲೆಯನ್ನು ಪೋಷಿಸಿ, ಬೆಳೆಸಿ ಜನರ ಬಳಿ ನಿರಂತರ ಕೊಂಡೊಯ್ಯುತಿರುವ ಸಕಲರಿಗೂ ನಮಿಸಿ ಶುಭಕೋರೋಣ.
Credit: Facebook Hemant Chinnu
No comments:
Post a Comment
If you have any doubts please let me know