ಐಸಾಕ್ ನ್ಯೂಟನ್ ಜೀವನ ಹಾಗೂ (ಬೆಳಕಿನ ಶಾಸ್ತ್ರ ) ಆಪ್ಟಿಕ್ಸ್ ಪೇಪರ್ ಮಂಡನೆ
ಸರ್ ಐಸಾಕ್ ನ್ಯೂಟನ್ ಜೀವನ:
ಸರ್ ಐಸಾಕ್ ನ್ಯೂಟನ್ ಯಾರಿಗೆ ಗೊತ್ತಿಲ್ಲ ಹೇಳಿ. ವಿಜ್ಞಾನ ಕ್ಷೇತ್ರದ ಧ್ರುವತಾರೆ ಎಂದೇ ಪ್ರಸಿದ್ಧಿ ಪಡೆದಿರುವ ನ್ಯೂಟನ್ ಅವರನ್ನು ಆಲ್ರೌಂಡರ್ ವಿಜ್ಞಾನಿ ಎನ್ನಲಾಗುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ನ್ಯೂಟನ್ ಅವರದ್ದು ಸಿಂಹಪಾಲು ಎಂದರೆ ತಪ್ಪಾಗಲಾರದು. ಸರ್ ಐಸಾಕ್ ನ್ಯೂಟನ್ ಒಬ್ಬ ಇಂಗ್ಲೀಷ್ ಗಣಿತಜ್ಞ, ಭೌತಶಾಸತ್ರಜ್ಞ, ಖಗೋಳಶಾಸ್ತ್ರಜ್ಞ, ಲೇಖಕ ಹೀಗೆ ಅವರ ವ್ಯಕ್ತಿತ್ವ ಬಹು ವಿಶಾಲ. ಚಲನೆಯ ನಿಯಮಗಳು, ಗುರುತ್ವಾಕರ್ಷಣ ನಿಯಮ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿಯ ಅವರ ಸಂಶೋಧನೆ ಸಾರ್ವಕಾಲಿಕ.
ಸರ್ ಐಸಾಕ್ ನ್ಯೂಟನ್ ಜನನ :
ರೋಗಗಳ ಕಾಲ
ಈಗ, ಕೊರೋನಾ ಮಹಾಮಾರಿಯಿಂದಾಗುತ್ತಿರುವ ಲಾಕ್‌ಡೌನ್‌ನಂತೆ ಆಗ, ಪ್ಲೇಗ್ ಮಾರಿಯಿಂದ ಜನರನ್ನು ರಕ್ಷಿಸಲು ಸರಕಾರಗಳು ಲಾಕ್ ಡೌನ್ ಘೋಷಿಸುತ್ತಿದ್ದವು. 1666 ರಲ್ಲಿ ಅದೇ ತಾನೆ ಐಸಾಕ್ ನ್ಯೂಟನ್ ಕೆಂಬ್ರಿಡ್ಜ್ ವಿವಿಯಲ್ಲಿ ಬಿಎ ಮುಗಿಸಿದ್ದ. ಆದರೆ, ಆ ಚಳಿಗಾಲದಲ್ಲಿ ಪ್ಲೇಗ್ ರೋಗ ಎಲ್ಲೆಡೆ ಹಬ್ಬಿದ್ದರಿಂದ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿತ್ತು. ಕಡ್ಡಾಯವಾಗಿ ಈತ ತನ್ನ ಅಜ್ಜಿಯ ಮನೆಗೆ ಹೋಗಬೇಕಾಯಿತು. ಅಲ್ಲಿ ತಾನೊಬ್ಬನೇ ವಿಶ್ವ ವಿದ್ಯಮಾನಗಳ ಕುರಿತು ಚಿಂತಿಸುತ್ತ ತೋಟದಲ್ಲಿ ಓಡಾಡಾಡಿಕೊಂಡಿದ್ದ. 1666ರ ಒಂದೇ ವರ್ಷದಲ್ಲಿ ಇಡೀ ಜಗತ್ತಿನ ಚಿಂತನೆಯನ್ನೇ ಬದಲಿಸುವ ಐದು ಸಂಶೋಧನೆಗಳನ್ನು ಮಾಡಿದ. ಕ್ಯಾಲ್ಕುಲಸ್ ಎಂಬ ಗಣಿತ ವಿಧಾನವನ್ನೇ ರೂಪಿಸಿಬಿಟ್ಟ.
ಐಸಾಕ್ ನ್ಯೂಟನ್ ನ ಪ್ರಮುಖ ಸಂಶೋಧನೆಗಳು
ಬೈನಾಮಿಯಲ್ ಸಮೀಕರಣ ಕಂಡು ಹಿಡಿದ. ಬಿಳಿ ಬೆಳಕಿನಲ್ಲಿ ಸಪ್ತವರ್ಣಗಳಿವೆ ಎಂದು ಪತ್ತೆ ಹಚ್ಚಿದ. ಮರದಿಂದ ಸೇಬು ಬೀಳುವುದನ್ನು ಕಂಡು ಗುರುತ್ವ ಸಿದ್ದಾಂತದ ಮೂಲ ಹೊಳವುಗಳನ್ನು ಗಳಿಸಿದ. ರಜೆ ಮುಗಿಸಿ 1667ರಲ್ಲಿ ಕಾಲೇಜಿಗೆ ಬಂದಾಗ ಈತನ ಗುರು ಐಸಾಕ್ ಬ್ಯಾರೋ ನಿಬ್ಬೆರಗಾದ. ಗಣಿತ ಪೀಠದ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ಕೊಟ್ಟು 26 ವರ್ಷದ ಈ ಎಳೆಯ ಶಿಷ್ಯನನ್ನು ಪೀಠದಲ್ಲಿ ಕೂರಿಸಿದ. ಹೀಗೆ ಪ್ಲೇಗ್ ಮಹಾಮಾರಿಯಿಂದಾದ ಲಾಕ್ ಡೌನ್‌ನ ಆ ಒಂದೇ ವರ್ಷದಲ್ಲಿ ಜಗತ್ತು, ಸೂರ್ಯ ಚಂದ್ರರಿರುವವರೆಗೂ ನೆನಪಿಡುವ ಹಾಗೆ ಅಮೂಲ್ಯವಾದ ಐದು ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡ ಆ ಮಹಾನ್ ವಿಜ್ಞಾನಿಯೇ ಸರ್ ಐಸಾಕ್ ನ್ಯೂಟನ್.
ಐಸಾಕ್ ನ್ಯೂಟನ್ ಆಪ್ಟಿಕ್ಸ್ ಪೇಪರ್ ಮಂಡನೆ
1672ರ ಫೆಬ್ರವರಿ 8ರಂದು, ಸರ್ ಐಸಾಕ್ ನ್ಯೂಟನ್ ತನ್ನ ಮೊದಲ ಆಪ್ಟಿಕ್ಸ್ (ಬೆಳಕಿನ ಶಾಸ್ತ್ರ) ಪೇಪರ್ ಅನ್ನು ಲಂಡನ್ನಿನ ರಾಯಲ್ ಸೊಸೈಟಿಯ ಮುಂದೆ ಪ್ರಸ್ತುತಪಡಿಸಿದರು. ಹೀಗೆ ತಮ್ಮ ಸಂಶೋಧನಾ ಪ್ರಬಂಧವನ್ನು ಓದುವುದಕ್ಕೂ ಮುಂಚಿನ ತಿಂಗಳವೇ ಅವರು ರಾಯಲ್ ಸೊಸೈಟಿಯ ಗೌರವಾನ್ವಿತ ಸದಸ್ಯರಾಗಿದ್ದರು. ಮೊದಲು ಪ್ರತಿಬಿಂಬಿಸುವ ದೂರದರ್ಶಕದ ಮೂಲವಿನ್ಯಾಸ ಗುರುತಿಸಿದರು. ನ್ಯೂಟನ್, ಅದಾಗಲೇ 1665ರಲ್ಲಿ ದೃಗ್ವಿಜ್ಞಾನ ತನಿಖೆ ಮಾಡಲು ಹಲವಾರು ವರ್ಷಗಳ ಕಾಲ ಕಳೆದಿದ್ದರು. ಬೆಳಕಿನ ಪ್ರಸರಣದೊಂದಿಗೆ ಗಾಜಿನ ಪ್ರಿಸಮ್ (ತ್ರಿಭುಜಪಾದ ಪಟ್ಟಕ )ನ ಬಣ್ಣಗಳ ಕುರಿತಾದ ಅಧ್ಯಯನಗಳು ಬೆಳಕು ಮತ್ತು ಬಣ್ಣಗಳ ಬಗ್ಗೆ ಅವರ ಪ್ರಬಂಧದಲ್ಲಿ ದಾಖಲಿಸಲ್ಪಟ್ಟವು (1672). ನಂತರ ಅವುಗಳನ್ನು ಆಪ್ಟಿಕ್ಸ್ (1704)ನಲ್ಲಿ ವಿಸ್ತರಿಸಲಾಯಿತು.
ಇನ್ನೊಂದು ವಿಶೇಷವೆಂದರೆ, ವಿಜ್ಞಾನದ ಇತಿಹಾಸದಲ್ಲಿ ನ್ಯೂಟನ್ ಅಥವಾ ಆಲ್ಬರ್ಟ್ ಐನ್‌ಸ್ಟೀನ್‌ನಲ್ಲಿ ಯಾರು ಹೆಚ್ಚಿನ ಪ್ರಭಾವ ಬೀರಿದ್ದರು ಎಂಬ ಬಗ್ಗೆ ಬ್ರಿಟನ್‌ನ ರಾಯಲ್ ಸೊಸೈಟಿಯು 2005ರಲ್ಲಿ ನಡೆಸಿದ ವಿಜ್ಞಾನಿಗಳ ಮತ್ತು ಸಾರ್ವಜನಿಕರ ಸಮೀಕ್ಷೆಯಲ್ಲಿ ಸ್ಪಷ್ಟವಾದ ವರದಿಯ ಪ್ರಕಾರ, ನ್ಯೂಟನ್ ವಿಜ್ಞಾನಿಗಳಿಗೆ ಈಗಲೂ ಪ್ರಭಾವಶಾಲಿಯಾಗಿಯೇ ಮುಂದುವರೆದಿದ್ದಾರೆ. ಟ್ಟಾರೆಯಾಗಿ, ವಿಜ್ಞಾನಕ್ಕೆ ನೀಡಿದ ಕೊಡುಗೆಯಲ್ಲಿ ಹೆಚ್ಚಿನ ಪಾಲನ್ನು ನ್ಯೂಟನ್ ನೀಡಿದ್ದಾರೆ ಎಂದು ಪರಿಗಣಿತವಾಗಿದ್ದರೂ, ಮನುಕುಲಕ್ಕೆ ನೀಡಿದ ಕೊಡುಗೆಯಲ್ಲಿ ಇಬ್ಬರೂ ಸಹಾ ಸಮೀಪವರ್ತಿಗಳೇ.
ನಾವು ಇದುವರೆಗೂ ತಿಳಿದುಕೊಂಡದ್ದು ಕೇವಲ ಒಂದು ನೀರಿನ ಹನಿಯಷ್ಟು ಮಾತ್ರ. ಆದರೆ, ಇನ್ನೂ ತಿಳಿಯಬೇಕಿರುವುದು ಸಾಗರದಷ್ಟಿದೆ.
No comments:
Post a Comment
If you have any doubts please let me know