ಸ್ಟೆತೋಸ್ಕೋಪ್ ಪಿತಾಮಹ: ರೆನೆ ಥಿಯೋಫಿಲ್ ಹಯಸಿಂಥೆ ಲೆನೆಕ್ ವಿಜ್ಞಾನಿ ಪರಿಚಯ
ಸ್ಟೆತೊಸ್ಕೋಪ್ ಸಂಶೋಧನೆಯ ಹಿನ್ನೆಲೆ
ಆತನ ಕೈಗುಣ ಚೆನ್ನಾಗಿದೆಯೆಂದು ಜನ ಅವನಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿದ್ದರು. ಹೀಗೆ ಬಂದ ರೋಗಿಗಳಿಗೆ ಸಾಂತ್ವನ ಹೇಳುತ್ತಾ, ಅವರಿಗಿರುವ ಕಾಯಿಲೆಯನ್ನು ಪತ್ತೆಮಾಡಿ ಯೋಗ್ಯವಾದ ಔಷಧಿಗಳನ್ನು ಕೊಡುತ್ತಿದ್ದ. ಹೀಗಾಗಿ ಆತ ಜನಪ್ರೀಯ ವೈದ್ಯನಾಗಿದ್ದ.
ವೈದ್ಯಕೀಯ ಕಟ್ಟುಪಾಡುಗಳು
ಒಂದು ದಿನ ಈತನ ಕ್ಲಿನಿಕ್‌ಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಂಪ್ರದಾಯಸ್ಥ ಕುಟುಂಬದ ಸ್ಥೂಲಕಾಯದ, ನಾಚಿಕೆ ಸ್ವಭಾವದ ಸುಂದರ ತರುಣಿಯೊಬ್ಬಳು ಬರುತ್ತಾಳೆ. ಆಗಿನ ಕಾಲದಲ್ಲಿ ತರುಣಿಯರನ್ನು ಪುರುಷ ವೈದ್ಯರು ದೇಹ ಮುಟ್ಟಿ ನೋಡಿ ಚಿಕಿತ್ಸೆ ಕೊಡುವ ಹಾಗಿದ್ದಿಲ್ಲ. ಹೀಗಾಗಿ, ಈತನಿಗೆ ಇದೊಂದು ತಲೆನೋವಾಗಿ ಪರಿಣಮಿಸುತ್ತದೆ. ಆಗ ಶಬ್ದಶಾಸ್ತ್ರ ( ಅಕೋಸ್ಟಿಕ್ಸ್) ದ ಆಧಾರದ ಮೇಲೆ ಪೇಪರ್ ಕೊಳವೆಯೊಂದನ್ನು ಮಾಡಿ ಅದರ ಒಂದು ಬದಿಯನ್ನು ಆಕೆಯ ಎದೆಗೂ ಇನ್ನೊಂದು ಬದಿಯಲ್ಲಿ ತನ್ನ ಕಿವಿಯಿಂದ ಅವಳ ಹೃದಯ ಬಡಿತವನ್ನು ಆಲಿಸುತ್ತಾನೆ. ನಂತರ ದೇಹದಲ್ಲಿ ಆಗುತ್ತಿರುವ ತೊಂದರೆಯನ್ನು ಕೇಳಿ ತಿಳಿದುಕೊಂಡು ಔಷಧಿಗಳನ್ನು ಕೊಟ್ಟು ಕಳಿಸುತ್ತಾನೆ.
1761ರಲ್ಲಿ ಜೆ.ಎಲ್. ಅವೆನ್ ಬಗ್ಗರ್, ಎದೆ ಬಡಿತ, ವ್ಯಕ್ತಿಯ ಆರೋಗ್ಯವನ್ನು ಅವನ ಸ್ಥಿತಿ ಗತಿಗಳನ್ನು ಸೂಚಿಸುತ್ತದೆಂದು ಹೇಳಿದ್ದನು. ಹೀಗಾಗಿ, ಆಗೆಲ್ಲಾ ವೈದ್ಯರು ರೋಗಿಯ ಎದೆಗೆ, ಬೆನ್ನಿಗೆ ಕಿವಿ ಇಟ್ಟು ಹೃದಯ ಬಡಿತ ಆಲಿಸಿ ಚಿಕಿತ್ಸೆ ಕೊಡುತ್ತಿದ್ದರು.
ಸ್ಟೆತೋಸ್ಕೋಪ್ ಸಂಶೋಧನೆಯ ಹಿಂದಿದೆ ರೋಚಕ ಕಥೆ:
ಅದು 1816ನೇ ಇಸ್ವಿಯ ಮುಸ್ಸಂಜೆಯ ಒಂದು ದಿನ, 35 ವರ್ಷದ ಈ ತರುಣ ವೈದ್ಯ, ಲೌವ್ರೇ ಅರಮನೆಯ ಮುಂದಿನ ಹುಲ್ಲು ಮೈದಾನದಲ್ಲಿ ಬೀಸುತ್ತಿದ್ದ ತಂಪಾದ ಗಾಳಿಯಲ್ಲಿ ವಾಕ್ ಮಾಡುತ್ತಿದ್ದ. ಅದೇ ಸಮಯದಲ್ಲಿ ಕೆಲವು ಶಾಲಾ ಮಕ್ಕಳು ಟೊಳ್ಳಾದ ಮರದ ತುಂಡಿನ ಒಂದು ಭಾಗವನ್ನು ತಮ್ಮ ಕಿವಿಯ ಹತ್ತಿರ ಹಿಡಿದುಕೊಂಡು ಇನ್ನೊಂದು ಬದಿಯಿಂದ ಬರುತ್ತಿರುವ ಹೊರಗಿನ ಶಬ್ದವನ್ನು ಆಲಿಸುತ್ತಾ ಆಟವಾಡುತ್ತಿರುವುದನ್ನು ಗಮನಿಸಿದ. ಆಗಲೇ ತಲೆಯಲ್ಲಿ ಏನೋ ಒಂದು ಹೊಳೆದಂತಾಗಿ ಮನೆಗೆ ಹೋದವನೇ ಒಂದು ಉದ್ದನೆಯ ಮರದ ಕೊಳವೆ ತೆಗೆದುಕೊಂಡು ಪ್ರಯೋಗಕ್ಕೆ ಇಳಿಯುತ್ತಾನೆ.
ಮಕ್ಕಳ ಆಟವೇ ಸ್ಟೆತೊಸ್ಕೋಪ್ ಸಂಶೋಧನೆಗೆ ಪ್ರೇರಣೆ:
ಹಲವು ಸಾರಿ ಅದನ್ನು ತನ್ನ ರೋಗಿಗಳ ಎದೆಗೆ, ಬೆನ್ನಿಗೆ ಹಿಡಿದು ಇನ್ನೊಂದು ಬದಿಯನ್ನು ತನ್ನ ಕಿವಿಯ ಹತ್ತಿರ ಹಿಡಿದು, ಅವರ ಹೃದಯ ಬಡಿತವನ್ನು ಆಲಿಸುತ್ತಾನೆ. ಹೀಗೆ ರೂಪುಗೊಂಡ ವೈದ್ಯಕೀಯ ಉಪಕರಣವೇ ಸ್ಟೆತೊಸ್ಕೋಪ್ (ಎದೆದರ್ಶಕ). ಹೌದು, ಈ ರೀತಿಯಾಗಿ ಮಕ್ಕಳ ಆಟದಿಂದ ಪ್ರೇರಿತನಾಗಿ ಸ್ಟೆತೊಸ್ಕೋಪ್ ಎಂಬ ಅಪರೂಪದ ವೈದ್ಯಕೀಯ ಉಪಕರಣ ಕಂಡು ಹಿಡಿದ ಆ ಮಹಾನ್ ಫ್ರೆಂಚ್ ವೈದ್ಯನೇ ರೆನೆ ಥಿಯೋಫಿಲ್ ಹಯಸಿಂಥೆ ಲೆನೆಕ್.
ಸ್ಟೆತೊಸ್ಕೋಪ್ ಪಿತಾಮಹ ರೆನೆ ಥಿಯೋಫಿಲ್ ಹಯಸಿಂಥೆ ಲೆನೆಕ್ ಜನನ:
17 ನೇ ಫೆಬ್ರವರಿ 1781ರಂದು ಫ್ರಾನ್ಸ್‌ನ ಕ್ವಿಂಪರ್ ಎಂಬಲ್ಲಿ ಜನಿಸಿದ ಲೆನೆಕ್, ಚುರುಕುಬುದ್ದಿಯ ಹುಡುಗ, ದುರ್ದೈವದ ಸಂಗತಿ ಎಂದರೆ, ಆತ ಹುಟ್ಟಿನಿಂದಲೇ ಹಲವು ವಿಧದ ರೋಗಗಳನ್ನು ಬೆನ್ನಿಗಂಟಿಸಿಕೊಂಡೇ ಬಂದಿದ್ದ. ದೀರ್ಘಕಾಲಿನ ಜ್ವರ ಬಾಲಕ ಲೆನೆಕ್‌ನನ್ನು ಹೈರಾಣ ಮಾಡಿತ್ತು. ಅಲ್ಲದೇ ಆಯಾಸ, ಉಬ್ಬಸಗಳಿಂದ ಬಳಲುತ್ತಿದ್ದ ಈತನಿಗೆ ಅಸ್ತಮಾ ಇದೆ ಎಂದು ನಂಬಲಾಗಿತ್ತು. ಈ ರೀತಿ ಹದಗೆಟ್ಟ ಆರೋಗ್ಯದಿಂದ ಬೇಸತ್ತ ಆತ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಅಂತಹ ಸಮಯದಲ್ಲಿ ಅವನ ಜೀವ ಕಾಪಾಡಿದ್ದೇ ಸಂಗೀತ. ಹೀಗಾಗಿ, ಲೆನೆಕ್, ತನ್ನ ಬಿಡುವಿನ ಸಮಯದಲ್ಲಿ ಕೊಳಲು ನುಡಿಸುವುದನ್ನು ಮತ್ತು ಕವಿತೆಗಳನ್ನು ಆಲಿಸುವುದನ್ನು ರೂಢಿಸಿಕೊಂಡಿದ್ದನು.
ಲೆನೆಕ್, ತಯಾರಿಸಿದ ಮರದ ತುಂಡಿನ ಮೊಟ್ಟ ಮೊದಲ ಸ್ಟೆತೊಸ್ಕೋಪ್, 25 ಸೆಂಮೀ ಉದ್ದ ಮತ್ತು 2.5 ಸೆಂಮೀ ಅಗಲವಾಗಿತ್ತು. ವೈದ್ಯಕೀಯ ಜಗತ್ತಿನಲ್ಲಿ ಲೆನೆಕ್ ತಯಾರಿಸಿದ ಈ ಉಪಕರಣ ಬರೋಬ್ಬರಿ ಎಂಭತ್ತು ವರ್ಷಗಳವರೆಗೆ ಚಾಲ್ತಿಯಲ್ಲಿತ್ತು.
19 ನೇ ಶತಮಾನದ ಅಂತ್ಯದಲ್ಲಿ ಸ್ಟೆತೊಸ್ಕೋಪ್ ಈಗಿರುವ ರೂಪ ತಾಳಿತು. 1851ರಲ್ಲಿ ಅರ್ಥರ್ ಲಿಯರ್ ಡಾಡ್, ಎರಡು ಪಿನ್‌ಗಳನ್ನೊಳಗೊಂಡ ಆಧುನಿಕ ಸ್ಟೆತೊಸ್ಕೋಪ್ ಕಂಡುಹಿಡಿದರು. ಈ ಉಪಕರಣಕ್ಕೆ 1852ರಲ್ಲಿ ಆಧುನಿಕ ಸ್ಪರ್ಶ ಕೊಟ್ಟವನು ಜಾರ್ಜ್ ಕ್ಯಾಮನ್. ಹೀಗೆ ಹಲವಾರು ಸಂಶೋಧಕರ ಕೈಯಲ್ಲಿ ರೂಪುತಾಳಿದ ಸ್ಟೆತೊಸ್ಕೋಪ್, ವೈದ್ಯಕೀಯ ಕ್ಷೇತ್ರದಲ್ಲಿ ಅತೀ ಹೆಚ್ಚು ಬಳಕೆಯಾಗುವ ಉಪಕರಣವೆಂಬ ಖ್ಯಾತಿಗೆ ಸ್ಟೆತೊಸ್ಕೋಪ್ ಪಾತ್ರವಾಗಿದೆ.
ಎದೆ ಬಡಿತದಿಂದ ಹೃದಯ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಲೆನೆಕ್. 1819ರಲ್ಲಿ ಪ್ರಕಟವಾದ ಆ್ಯನ್ ಮೆಡಿಕಲ್ ಆಸ್ಕಷನ್ ಎಂಬ ತನ್ನ ಕೃತಿಯಲ್ಲಿ ಈ ಕುರಿತು ಎಲ್ಲ ವಿವರಗಳನ್ನು ದಾಖಲಿಸಿದ್ದಾನೆ. ಕೇವಲ 45 ವರ್ಷ ಬದುಕಿದ ಲೆನೆಕ್, ಆಗಸ್ಟ್ 13, 1826 ರಂದು ಫ್ರಾನ್ಸ್‌ನ ಪ್ರೇ ಎಂಬಲ್ಲಿ ಅಸ್ತಂಗತನಾದನು.
ಮಾಹಿತಿ : ಸಂಗ್ರಹ
(ಲೇಖನ ಕೃಪೆ: ಸುದ್ದಿಪತ್ರಿಕೆ)
No comments:
Post a Comment
If you have any doubts please let me know