🌺 ಝಾನ್ಸಿ ರಾಣಿ ಲಕ್ಷ್ಮೀಬಾಯಿ 🌺
ಆತ್ಮೀಯ ಸ್ನೇಹಿತರೇ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದೊಂದು ಹೆಸರು ಕೇಳಿದರೆ ಸಾಕು ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆ. ಸಾಮಾನ್ಯ ಹೆಣ್ಣುಮಗಳೊಬ್ಬಳು ಬ್ರಿಟಿಷರ ಬಲಿಷ್ಠ ಸೈನ್ಯದೆದುರು ಉಗ್ರ ಹೋರಾಟದ ಕಹಳೆ ಮೊಳಗಿಸಿದ್ದು ಇಂದಿಗೂ ಹೆಮ್ಮೆ ಪಡುವ ಸಂಗತಿ. ಅಂತಹ ಹೆಣ್ಣುಮಗಳು ಬೇರಾರೂ ಅಲ್ಲ ಅವಳೇ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ..
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಝಾನ್ಸಿರಾಣಿ ಲಕ್ಮೀಬಾಯಿ ಅವರ ಕತೆ ನೆನೆದಾಗಲೆಲ್ಲಾ ಎಂತಹ ಮೃದುಹೃದಯಿಗಳಲ್ಲೂ ಮೈನವಿರೇಳವಂತಹ ಸಾಹಸದ ಕಿಡಿ ತುಂಬಿಕೊಂಡಂತಹ ಭಾವ ಮೂಡುತ್ತದೆ. ರಾಣಿ ಲಕ್ಷ್ಮೀಬಾಯಿ ಅವರು ನವೆಂಬರ್ 19, 1829 ರಲ್ಲಿ ಕಾಶಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಣಿಕರ್ಣಿಕ ಆಕೆಯ ಬಾಲ್ಯದ ಹೆಸರು. ಮಣಿಕರ್ಣಿಕ ನಾಲ್ಕು ವರ್ಷದ ಎಳೆವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಳು. ತಂದೆ ಮೊರೋಪಂತ್ ತಂಬೆಯವರು ಮುಂದೆ ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರ ಆಸ್ಥಾನವನ್ನು ಸೇರಿದರು. ಮಣಿಕರ್ಣಿಕಳಿಗೆ 14 ವರ್ಷವಾದಾಗ ಮಹಾರಾಜ್ ರಾಜ ಬಾಲಗಂಗಾಧರ ರಾವ್ ಅವರೊಡನೆ ಆಕೆಗೆ ವಿವಾಹವಾಯಿತು. ವಿವಾಹದ ಸಂದರ್ಭದಲ್ಲಿ ಆಕೆಯ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿಸಲಾಯಿತು.
ಲಕ್ಷ್ಮೀಬಾಯಿ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆ ಮುಂತಾದುವನ್ನು ಕಲಿತು ತನ್ನ ಸ್ತ್ರೀ ಗೆಳತಿಯರನ್ನು ಜೊತೆಗೂಡಿ ಚಿಕ್ಕ ಸೈನ್ಯವನ್ನೇ ಕಟ್ಟಿದರು. 1851ರಲ್ಲಿ ಲಕ್ಷ್ಮೀಬಾಯಿ ಗಂಡುಮಗುವಿಗೆ ಜನ್ಮವಿತ್ತರು. ಆದರೆ ಆ ಮಗು ಕೇವಲ 4 ತಿಂಗಳಿರುವಾಗಲೇ ಮರಣವಪ್ಪಿತು. ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ ಎಂಬ ಹುಡುಗನನ್ನು ದತ್ತು ಪಡೆದರು. ಆದರೆ ತನ್ನ ಮಗುವಿನ ಸಾವಿನ ದುಃಖದಿಂದ ಹೊರಬರಲಾರದ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರು 21, ನವೆಂಬರ್ 1853ರಲ್ಲಿ ಸಾವಿಗೀಡಾದರು.
ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿ ಅಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಅಧಿಕಾರಿಯಾದ ಲಾರ್ಡ್ ಡಾಲ್‌ಹೌಸಿಯು ದಾಮೋದರ ರಾವ್ ಅವರಿಗೆ ರಾಜ್ಯಾಭಿಷೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್‌ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಜವಾಬ್ಡಾರಿಯೆಂದು ತಿಳಿಸಿ ರಾಣಿ ಲಕ್ಷ್ಮೀಬಾಯಿಯವರಿಗೆ ರುಪಾಯಿ 60,000 ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೋಟೆಯನ್ನು ಬಿಟ್ಟು ಹೊಗಲು ಆಜ್ಞೆ ಮಾಡಿದನು.
ಝಾನ್ಸಿಯಲ್ಲಿ ಇದೆಲ್ಲಾ ನಡೆಯುತ್ತಿರುವ 1857ರ ವರ್ಷದ ಇದೇ ಸಂದರ್ಭದಲ್ಲಿ ಮೀರತ್ತಿನಲ್ಲಿ ಸಿಪಾಯಿ ದಂಗೆ ಮೊದಲ್ಗೊಂಡಿತು. ಬ್ರಿಟಿಷರಿಗೆ ದೇಶದ ಇತರೆ ಪ್ರದೇಶಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಸಂದರ್ಭ ಒದಗಿದ ಕಾರಣದಿಂದಾಗಿ ಝಾನ್ಸಿಯನ್ನು ರಾಣಿ ಲಕ್ಷ್ಮೀಬಾಯಿಯವರ ಆಳ್ವಿಕೆಗೇ ಬಿಟ್ಟುಕೊಟ್ಟರು. ಇದೇ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ಶ್ರೇಷ್ಠತೆಯು ರುಜುವಾತಾಯಿತು. ರಾಣಿ ಲಕ್ಷ್ಮೀಬಾಯಿಯವರ ನಾಯಕತ್ವದಲ್ಲಿ ಝಾನ್ಸಿಯಲ್ಲಿ ಶಾಂತಿ ಹಾಗು ನೆಮ್ಮದಿ ನೆಲೆಸಿ ಅವರೊಬ್ಬ ಉತ್ತಮ ನಾಯಕಿ ಎಂದು ಪ್ರಜೆಗಳ ಜೊತೆಗೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಕೂಡಾ ಪ್ರಶಂಸಿಸುವಂತಾಯಿತು. ಇಂಥಹ ವಾತಾವರಣದಲ್ಲಿ ರಾಣಿ ಲಕ್ಷ್ಮೀಬಾಯಿಯವರೆಗೆ ಬ್ರಿಟಿಷರ ವಿರುದ್ದವಾಗಿ ಹೋಗುವ ಯಾವುದೇ ಯೋಚನೆಯೂ ಇರಲಿಲ್ಲ.
ಎಲ್ಲವೂ ಸುಸೂತ್ರವಾಗಿದೆ ಎಂದೆನಿಸಿದ್ದ ಸಂದರ್ಭದಲ್ಲಿ ಸರ್ ಹುಘ್ ರೋಸ್ ನೇತ್ರತ್ವದ ಸೈನ್ಯ ಝಾನ್ಸಿಯನ್ನು ಮಾರ್ಚ 1858ರ ಸಮಯದಲ್ಲಿ ಮುತ್ತಿಗೆ ಹಾಕ್ಕಿದ್ದರಿಂದ ರಾಣಿ ಲಕ್ಷ್ಮೀಬಾಯಿಯವರ ಬ್ರಿಟಿಷರ ಬಗೆಗಿನ ನಿಲುವು ಬದಲಾಯಿತು. ರಾಣಿ ಲಕ್ಷ್ಮೀಬಾಯಿ ಹಾಗೂ ಅವರ ನಿಷ್ಠಾವಂತ ಸೈನಿಕರು ಶರಣಾಗಲು ಒಪ್ಪಲಿಲ್ಲ. ಎರಡು ವಾರಗಳ ವರೆಗೆ ಉಗ್ರ ಹೊರಾಟ ನಡೆಸಿದರು. ಈ ಯುದ್ಧದ ಸಮಯದಲ್ಲಿ ಝಾನ್ಸಿಯ ಸ್ತ್ರೀಸೈನಿಕರು ಸೇನಾನಿಗಳಿಗೆ ಯುದ್ಧಸಾಮಗ್ರಿ ಒದಗಿಸುವುದು ಭೋಜನದ ವ್ಯವಸ್ಥೆ ನಿರ್ವಹಿಸುವುದು ಇವೇ ಮುಂತಾದ ಜವಾಬ್ಧಾರಿಗಳನ್ನು ನಿರ್ವಹಿಸುತ್ತಿದ್ದರು.
ರಾಣಿ ಲಕ್ಷ್ಮೀಬಾಯಿ ಅವರು ಸ್ವಯಂ ಸೈನಿಕರ ನಡುವಿನಲ್ಲಿ ಓಡಾಡಿಕೊಂದು ಅವರನ್ನು ಹುರಿದುಂಬಿಸಿ ಬಹಳ ದಿಟ್ಟತನದಿಂದ ಹೋರಾಡಿದರು. ಇಪ್ಪತ್ತು ಸಾವಿರ ಸೇನೆಯ ಮುಖಂಡನಾಗಿ ತಾತ್ಯಾ ಟೋಪಿ ಯುದ್ದ ಮಾಡಿ ರಾಣಿ ಲಕ್ಷ್ಮೀಬಾಯಿ ಹಾಗೂ ಝಾನ್ಸಿಯು ಸ್ವತಂತ್ರವಾಗಲು ಸಹಾಯ ಮಾಡಿದರು. ಆದರೆ ಬ್ರಿಟಿಷ್ ಸೈನಿಕರು ಕೆಲವೇ ದಿನಗಳಲ್ಲಿ ಪುನಃ ಆಕ್ರಮಣ ಮಾಡಿದಾಗ ಝಾನ್ಸಿಯ ಸೈನಿಕರಿಂದ 3 ದಿನಗಳಿಗಿಂತ ಹೆಚ್ಚಿನ ಹೋರಾಟ ನಡೆಸಲಾಗಲಿಲ್ಲ.
ಬ್ರಿಟಿಷ್ ಸೈನಿಕರು ಝಾನ್ಸಿ ನಗರವನ್ನು ಮುತ್ತಿಗೆ ಹಾಕಿದಾಗ ರಾಣಿ ಲಕ್ಷ್ಮೀಬಾಯಿ ತನ್ನ ಕೆಲವು ಮಹಿಳಾ ಸೈನಿಕರು, ಮಗ ದಾಮೋದರ ರಾವ್ ಹಾಗೂ ಹಲವಾರು ರಕ್ಷಕರ ಜೊತೆಗೂಡಿ ತಪ್ಪಿಸಿಕೊಂಡು ತಾತ್ಯಾ ಟೊಪಿ ಹಾಗೂ ಇತರ ದಂಗೆಕೋರರ ಜೊತೆಗೆ ತಮ್ಮ ಸೈನ್ಯವನ್ನು ಸೇರಿಸಿದರು. ರಾಣಿ ಹಾಗೂ ತಾತ್ಯಾ ಟೊಪಿ ಅವರ ಸೇನೆ ಗ್ವಾಲಿಯರ್ಗೆ ಹೋಗಿ ಅಲ್ಲಿನ ಮಹಾರಾಜನ ಸೈನಿಕರನ್ನು ಸೋಲಿಸಿತು. ನಂತರ ಅವರು ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೋಂಡರು. ಆದರೆ ಯುದ್ದದ ಎರಡನೆಯ ದಿನ ಅಂದರೆ ಜೂನ್ 18, 1858ರಂದು ರಾಣಿ ಲಕ್ಷ್ಮೀಬಾಯಿ ಯುದ್ಧದಲ್ಲಿ ಸಾವನ್ನಪ್ಪಿದರು. ಬ್ರಿಟಿಷರು ಮೂರು ದಿನಗಳ ನಂತರದಲ್ಲಿ ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೊಂಡರು.
ಸರ್ ಹುಘ್ ರೋಸ್ ತನ್ನ ಯುದ್ದದ ಟಿಪ್ಪಣಿಯಲ್ಲಿ ರಾಣಿಯನ್ನು "ಅತೀ ಸುಂದರಿ, ದೃಢನಿಷ್ಠೆ, ತೀಕ್ಷ್ಣಮತಿ ಹಾಗೂ ಉಗ್ರ ನಾಯಕಿ" ಎಂದು ಪ್ರಶಂಸಿಸಿದ್ದಾನೆ. ರಾಣಿ ಲಕ್ಷ್ಮೀಬಾಯಿ ಅವರ ಕತೆ ಇಂದೂ ಕೂಡಾ ಭಾರತೀಯ ಜನಪದವನ್ನು, ಕಥೆಗಾರರನ್ನು, ಸಿನಿಮಾ, ನಾಟಕ, ದೂರದರ್ಶನ ಧಾರವಾಹಿ ಮುಂತಾದ ಕಲಾಮಾಧ್ಯಮದವರನ್ನು ಆಕರ್ಷಿಸುತ್ತಲೇ ಸಾಗಿದೆ. ಭಾರತೀಯ ಸೈನ್ಯ ಸಹಾ ತನ್ನ ಮಹಿಳಾ ಪಡೆಗೆ 'ಜಾನ್ಸಿ ರಾಣಿ ಲಕ್ಷ್ಮೀಬಾಯಿ ಪಡೆ' ಎಂಬ ಹೆಸರನ್ನಿಟ್ಟು ಗೌರವನೀಡಿದೆ. ರಾಣಿ ಲಕ್ಷ್ಮೀಬಾಯಿವರ ಗೌರವಾರ್ಥವಾಗಿ ದೇಶದೆಲ್ಲೆಡೆ ಅದರಲ್ಲೂ ಪ್ರಮುಖವಾಗಿ ಝಾನ್ಸಿ ಹಾಗು ಗ್ವಾಲಿಯರ್ ನಗರಗಳಲ್ಲಿ ರಾಣಿಯವರ ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.
ನಮ್ಮ ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಈ ಮಹಾನ್ ಮಾತೆಗೆ ನಮ್ಮ ಸಾಷ್ಟಾಂಗ ನಮನ.
ಧನ್ಯವಾದಗಳು :
Team EduTube Kannada
No comments:
Post a Comment
If you have any doubts please let me know