ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಸೂಪರ್ ಸಲಹೆಗಳು
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳು, ಪರೀಕ್ಷೆಯಲ್ಲಿ ಯಶಸ್ಸು ಪಡೆಯುತ್ತೇನೆ ಎಂಬ ಛಲದಿಂದ ಸಿದ್ಧತೆ ಆರಂಭಿಸಬೇಕು.
ಛಲವಿದ್ದಲ್ಲಿಯೇ ಗೆಲುವೂ ಇರುತ್ತದೆ!
ಅಮೆರಿಕದ ನ್ಯೂಯಾರ್ಕ್ ಮತ್ತು ಲಾಂಗ್ ಇಸ್ಲಾಂಡ್ ನಡುವೆ ಈಸ್ಟ್ನದಿ ಹರಿಯುತ್ತಿದೆ. ಇದಕ್ಕೊಂದು ಸೇತುವೆ ನಿರ್ಮಿಸಬೇಕೆಂದು ಶತಶತಮಾನಗಳಿಂದ ಅಮೆರಿಕನ್ನರು ಪ್ರಯತ್ನಪಡುತ್ತಲೇ ಇದ್ದರು. ಆದರೆ ನದಿಯ ಆಳದಿಂದಾಗಿ ಅದು ಸಾಧ್ಯವಾಗಿರಲೇ ಇಲ್ಲ. ಈ ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿದ ಎಂಜಿನಿಯರ್ ಹೆಸರು ಜಾನ್ ರಾಬ್ಲಿಂಗ್.
ರಾಬ್ಲಿಂಗ್ ಅಸಾಧ್ಯ ಎಂಬ ತಜ್ಞರ ಅಭಿಪ್ರಾಯಗಳನ್ನು ಮರೆತು ಸೇತುವೆ ನಿರ್ಮಿಸುವ ಕನಸು ಕಂಡರು. ಕನಸು ನನಸಾಗಿಸುವ ಛಲತೊಟ್ಟರು. ಕಂಡ ಕಂಡವರ ಹತ್ತಿರ ಈ ಕುರಿತು ಚರ್ಚಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ಎಂಜಿನಿಯರ್ ಆಗಿದ್ದ ಮಗ ವಾಂಷಿಗ್ಟನ್ಗೆ ತಮ್ಮ ಯೋಜನೆಯನ್ನು ಮನವರಿಕೆ ಮಾಡಿಕೊಟ್ಟರು. ಅಪ್ಪ-ಮಗ ಸೇರಿ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾದರು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ಕೆಲಸ ಆರಂಭಿಸಿಯೇ ಬಿಟ್ಟರು. ನೋಡಿದವರು 'ಇವರಿಗೆ ಹುಚ್ಚು ಹಿಡಿದಿದೆ' ಎಂದು ಆಡಿಕೊಂಡರು. ಆದರೆ ಇವರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಲೇ ಇಲ್ಲ. ಸೇತುವೆ ನಿರ್ಮಾಣದ ಕೆಲಸ ಜೋರಾಗಿಯೇ ನಡೆಯುತ್ತಿತ್ತು. ಹೀಗಿರುವಾಗ ಒಮ್ಮೆ ನಿರ್ಮಾಣ ನಡೆಯುತ್ತಿದ್ದಾಗ ದೊಡ್ಡ ಅಪಘಾತ ಸಂಭಸಿತು.
ಸೇತುವೆಯ ಕನಸುಕಂಡಿದ್ದ ಜಾನ್ ರಾಬ್ಲಿಂಗ್ ಮೃತಪಟ್ಟರೆ, ಅವರ ಮಗ ವಾಂಷಿಗ್ಟನ್ ಗಂಭೀರವಾಗಿ ಗಾಯಗೊಂಡಿದ್ದ. ಕೈಕಾಲು ಸ್ವಾದೀನ ತಪ್ಪಿತ್ತು. ಮಾತನಾಡಲು ಆಗುತ್ತಿರಲಿಲ್ಲ. ಆತ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದ ಈ ಅನಾಹುತ ಆಡಿಕೊಳ್ಳುವವರ ಬಾಯಿಗೆ ಮಸಾಲೆ ಒದಗಿಸಿತ್ತು. 'ತಲೆ ಗಟ್ಟಿ ಇದೆ ಎಂದು ಬಂಡೆಗೆ ಚೆಚ್ಚಿಕೊಂಡರೆ ಆಗುವುದು ಹೀಗೇ...' ಎಂದು ಟೀಕಿಸುತ್ತಾ ಅಪ್ಪ-ಮಗನದು ಹುಚ್ಚು ಸಾಹಸ ಎಂದು ತೆಗಳಿದರು.
ಆದರೆ ಅಪ್ಪ ಹೊತ್ತಿಸಿದ ಕಿಚ್ಚು ಮಗನ ಎದೆಯಲ್ಲಿ ಉರಿಯುತ್ತಿತ್ತು. ಹಾಸಿಗೆಯಲ್ಲಿಯೇ ಮಲಗಿದ್ದರೂ ಸೇತುವೆಯ ಕನಸು ಕಣ್ಣುಗಳಿಂದ ದೂರವಾಗಿರಲಿಲ್ಲ. ಆದರೆ ಏನೂ ಮಾಡಲಾಗದ ಅಸಾಹಯಕ ಪರಿಸ್ಥಿತಿ. ಒಮ್ಮೆ ಹೀಗೆ ಕಿಟಕಿಯಾಚೆ ನೋಡುತ್ತಿದ್ದಾಗ ಮುಗಿಲನ್ನು ಎತ್ತರದ ಮರವೊಂದು ಮುಟ್ಟುತ್ತಿರುವಂತೆ ವಾಂಷಿಗ್ಟನ್ಗೆ ಭಾಸವಾಯಿತು. ಕೂಡಲೇ ಏನೋ ಹೊಳೆಯಿತು. ಒಂದಿಷ್ಟ ಸ್ಪರ್ಷಜ್ಞಾನ ಹೊಂದಿದ್ದ ಕೈಯ ಒಂದೇ ಬೆರಳನ್ನು ಸಂವಾಹನಕ್ಕೆ ಆಯುಧವಾಗಿ ಬಳಸಲು ನಿರ್ಧರಿಸಿದರು.
ಹೆಂಡತಿಯನ್ನು ಕರೆದು ಒಂದು ಬೆರಳಿನ ಸ್ಪರ್ಷದ ಮೂಲಕವೇ ಎಂಜಿನಿಯರ್ಗಳನ್ನು ಕರೆತರಲು ಸೂಚಿಸಿದರು. ಅವರಿಗೆ 'ಇದು ಸಾಧ್ಯ' ಎಂಬುದನ್ನು ಹರಸಾಹಸ ಪಟ್ಟು ಮನವರಿಕೆ ಮಾಡಿದರು. ಮತ್ತೆ ಸೇತುವೆ ನಿರ್ಮಾಣದ ಕೆಲಸ ಆರಂಭವಾಗಿತ್ತು. ಅಗತ್ಯವಿದ್ದಾಗ ಕೈಬೆರಳಿನ ಸ್ಪರ್ಷದಿಂದ ಪತ್ನಿಗೆ ಮಾರ್ಗದರ್ಶನ ನೀಡಿದ ವಾಂಷಿಗ್ಟನ್ ಹಾಸಿಗೆಯಲ್ಲಿ ಮಲಗಿಯೇ 13 ವರ್ಷ ಸೇತುವೆ ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದ್ದರು. ಕೊನೆಗೂ ತೂಗು ಸೇತುವೆ ನಿರ್ಮಾಣವಾಗಿತ್ತು. ಇದು ಅಮೆರಿಕದ ಮೊತ್ತ ಮೊದಲ ತೂಗು ಸೇತುವೆ ಎಂಬ ಖ್ಯಾತಿಗಳಿಸಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಎಂದು ಬಣ್ಣಿಸಲಾಗುತ್ತಿದೆ.
ಸಾಧನೆಗೆ ಅಸಾಧ್ಯವಾದದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಮನುಷ್ಯನಲಿರಬೇಕು ಎಂದು ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಇದು ಸತ್ಯ ಎಂಬುದನ್ನು ಈ ಮೇಲಿನ ಸತ್ಯಘಟನೆ ಜಗತ್ತಿಗೆ ಸಾಬೀತುಪಡಿಸಿದೆ. ಎಂತಹ ಅಡೆ-ತಡೆಗಳು ಎದುರಾದರೂ ಹಿಂಜರಿಯದೆ, ಹಿಡಿದ ಕೆಲಸ ಮಾಡಿಮುಗಿಸುವವರು ಯಶಸ್ವಿ ವ್ಯಕ್ತಿಎನಿಸಿಕೊಳ್ಳುತ್ತಾರೆ. ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ. ಮನುಷ್ಯ ಬೆಳೆಯ ಬೇಕು, ಈ ರೀತಿಯ ಸಾಧನೆ ಮಾಡಬೇಕು ಎಂದರೆ ಗೆಲ್ಲಲೇಬೇಕು ಎನ್ನುವ ಛಲವಿರಬೇಕು ಅಷೇ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುವ ಅಭ್ಯರ್ಥಿಗಳೂ ಈ ರೀತಿಯ ಛಲದೊಂದಿಗೇ ಸಿದ್ಧತೆ ಆರಂಭಿಸಬೇಕು ಆಗ ಯಶಸ್ಸು ಕಂಡಿತಾ ಅವರದ್ದಾಗಿರುತ್ತದೆ.
ಛಲಕ್ಕೆ ಹೆಸರಾದ ಚಾಣಕ್ಯರ ಕತೆ ನಮಗೆ ಗೊತ್ತೇ ಇದೆ. ಬಾವಿಗೆ ಬಿದ್ದ ತನ್ನ ಮುದಿ ಕತ್ತೆಯನ್ನು ಸಮಾದಿ ಮಾಡಲೆಂದು ಅಗಸ ಹಾಕಿದ ಮಣ್ಣನ್ನು ಮೆಟ್ಟಿ ನಿಂತು ಬದುಕುಳಿದ ಕತ್ತೆ ಛಲದ ಪಾಠವನ್ನು ನಮಗೆ ಹೇಳಿಕೊಟ್ಟಿದೆ. ಹೀಗೆ ಛಲದಿಂದ ಯಶಸ್ವಿಯಾದವರ ನೂರಾರು ಕತೆಗಳು ನಮ್ಮ ಮುಂದಿರುವಾಗ ನಾವೇಕೆ ಏನನ್ನಾದರೂ ಸಾಧಿಸುವ ಛಲಕ್ಕೆ ಬೀಳಬಾರದು. ಛಲದಿಂದ ಗೆಲ್ಲೋಣ ಬನ್ನಿ...
ಧನ್ಯವಾದಗಳು
Team EduTube Kannada
No comments:
Post a Comment
If you have any doubts please let me know