🌺 ಜ್ಞಾನದ ಬಲದಿಂದ ಅಜ್ಞಾನದ ಕೇಡು 🌺
✳ ಪ್ರಿಯ ಮಿತ್ರರೇ,
ನಿನ್ನೆ ರಾತ್ರಿ ದೂರದರ್ಶನದಲ್ಲೊಂದು ಹಳೆಯ ಕಾಲದ ಚಲನಚಿತ್ರವೊಂದು ಪ್ರದರ್ಶನವಾಗುತ್ತಿತ್ತು, ಈಗಿನ ಕಾಲದ ಜನತೆಗೆ ಅಂತಹ ಚಿತ್ರಗಳ ಪೋಸ್ಟರ್ ನೋಡಲೂ ಸಹ ಆಗದಿರಬಹುದು. ಆದರೆ ಚಲನಚಿತ್ರದ ತಾತ್ಪರ್ಯವಂತೂ ನಮ್ಮ ತುಕ್ಕು ಹಿಡಿದ ವೈಚಾರಿಕತೆಯೆಂಬ ಕಬ್ಬಿಣದ ಸಲಾಕೆಯನ್ನೊಮ್ಮೆ ಒರೆಗೆ ಹಚ್ಚುವಂತಿತ್ತು. ಈ ಪ್ರಪಂಚದಲ್ಲಿ ಪ್ರತಿಯೊಂದು ಕ್ರಿಯೆಗೆ ವಿರುದ್ಧವಾದ ಕ್ರಿಯೆಯೊಂದು ನಡೆಯುತ್ತಲೇ ಇರುತ್ತದೆ ಎಂಬುದನ್ನು ಚಿತ್ರ ತೋರಿಸುತ್ತಿತ್ತು. ಆ ಚಿತ್ರದ ಹೆಸರು “ಸತ್ಯ ಹರಿಶ್ಚಂದ್ರ”.
ಇದ್ಯಾವುದೋ ಸುಳ್ಳನ್ನೇ ತನ್ನ ಬಂಡವಾಳವನ್ನಾಗಿಸಿಕೊಂಡು, ಸುಳ್ಳಿನ ಸರಮಾಲೆಗಳಿಂದಲೇ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಶರಣ್ ಅಭಿನಯದ ಆಧುನಿಕ ಸತ್ಯ ಹರಿಶ್ಚಂದ್ರ ಚಲನಚಿತ್ರವಲ್ಲ. ನಾನು ಹೇಳ ಹೊರಟಿರುವುದು ಸತ್ಯವೇ ನನ್ನ ತಂದೆ ತಾಯಿ ಎಂದುಕೊಂಡು ಸತ್ಯಕ್ಕಾಗಿಯೇ ಅರಮನೆ, ಹೆಂಡತಿ- ಮಗುವನ್ನು ತೊರೆದು ಸ್ಮಶಾನ ಕಾಯುವ ಕೆಲಸವಾದರೂ ಸರಿಯೇ ನಾನೆಂದಿಗೂ ಸತ್ಯದಿಂದ ವಿಮುಖನಾಗಲಾರೆ ಎಂದು ಸತ್ಯಕ್ಕಾಗಿಯೆ ಜೀವಿಸಿದ ಮಾಹಾನುಭಾವ, ಸತ್ಯಸಂದ ಮಹಾರಾಜ ಸತ್ಯ ಹರಿಶ್ಚಂದ್ರ ಕಥೆ.
ಪ್ರಿಯ ಸ್ನೇಹಿತರೇ, ಹರಿಶ್ಚಂದ್ರನ ಕಥೆ ತಮಗೆಲ್ಲ ತಿಳಿದಿರುವಂಥದ್ದೇ. ಅದೇನೇ ಇರಲಿ, ಆದರೆ ಇಲ್ಲಿ ನಾವೆಲ್ಲ ಚಿಂತಿಸಬೇಕಾದದ್ದು ಸತ್ಯ ಹರಿಶ್ಚಂದ್ರನ ಸತ್ಯ ಇಡೀ ಜಗತ್ತಿಗೇ ಪರಿಚಿತವಾಗಲು ವಿಶ್ವಾಮಿತ್ರ ಮಹರ್ಷಿಯ ಕಾಟವೇ ಕಾರಣ. ಒಂದು ವೇಳೆ ವಿಶ್ವಾಮಿತ್ರರು ವಸಿಷ್ಠ ಋಷಿಯ ಮಾತನ್ನು ಸುಮ್ಮನೇ “ಹೌದು, ಹರಿಶ್ಚಂದ್ರ ಸತ್ಯಸಂದ ಅವನೆಂತಹ ಸಂದರ್ಭಗಳಲ್ಲಿಯೂ ಸತ್ಯವನ್ನು ಬಿಡಲಾರ” ಎಂದು ಒಪ್ಪಿಕೊಂಡಿದ್ದರೆ ಸತ್ಯ ಹರಿಶ್ಚಂದ್ರನ ಸತ್ಯವಂತ ಎಂಬುದು ಜಗತ್ತಿಗೆ ಪರಿಚಯವಾಗುತ್ತಿರಲಿಲ್ಲ. ಅಂದರೆ ಸತ್ಯವೊಂದು ಬೆಳಕಿಗೆ ಬರಬೇಕಾದರೆ ತುಂಬ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಒಂದು ಎಂಬುದು ಈ ಕಥೆಯ ತಾತ್ಪರ್ಯ.
ಹಾಗೆಯೇ ನಮ್ಮ ಜೀವನವೂ ಸಹ ಒಳ್ಳೆಯದನ್ನು, ಉತ್ತಮವಾದುದನ್ನು ಪಡೆಯಬೇಕಾದರೆ ಹಲವು ಕಷ್ಟಗಳನ್ನು, ತೊಂದರೆಗಳನ್ನು ಎದುರಿಸಲೇಬೇಕಾಗುತ್ತದೆ. ಈ ಪ್ರಪಂಚದಲ್ಲಿ ಶ್ರೇಷ್ಠವಾದುದು ಯಾವುದೂ ಸುಮ್ಮನೇ ತಾನೇ ತಾನಾಗಿ ಒಲಿದು ಬರೋದಿಲ್ಲ. ಆದ್ದರಿಂದ ನಮ್ಮಲ್ಲಿರುವ ಶ್ರೇಷ್ಠತೆಯನ್ನು ಹೊರಗೆಡುಹಲು ಹಲವಾರು ಕಷ್ಟಗಳನ್ನು ಎದುರಿಸಲು ನಾವುಗಳು ಸದಾ ಸಿದ್ಧರಿರಬೇಕು. ಅದೆಂತಹ ಕಷ್ಟಗಳು ಎದುರಾದರೂ ನಾವು ನಮ್ಮತನ ಬಿಟ್ಟುಕೊಡದೇ ಸದಾ ನಮ್ಮ ಗುರಿಯತ್ತ ಮುನ್ನುಗ್ಗುವರಾಗಿರಬೇಕು. ಅಂದಾಗ ಮಾತ್ರ ನಮ್ಮಗಟ್ಟಿತನಕ್ಕೆ ಒಂದೊಳ್ಳೆ ಹೆಸರು ಬರುತ್ತದೆ.
“ಸೋಲು ನಮ್ಮನ್ನು ಸೋಲಿಸುವ ಮೊದಲು, ನಾವೇ ಸೋಲನ್ನು ಸೋಲಿಸುವಂತವರಾಗಬೇಕು.” ನಿನ್ನ ಮೇಲೆ ಎಸೆಯುವ ಅವಮಾನ, ಅಪಮಾನ, ನಿಂದನೆಗಳೆಂಬ ಕಲ್ಲುಗಳ ಕೆಳಗೆ ಸಿಲುಕಿ ನಲುಗಿ ಹೋಗದೇ, ಅದೇ ಕಲ್ಲುಗಳನ್ನು ಕಾಲಿನ ಕೆಳಗೆ ಹಾಕಿಕೊಂಡು ಅದೇ ಕಲ್ಲುಗಳಿಂದ ಮೆಟ್ಟಿಲುಗಳ ಮಾಡಿ ಯಶಸ್ಸಿನ ಉತ್ತುಂಗವನ್ನೇರಲು ದಾರಿ ಮಾಡಿಕೊಳ್ಳುವ ಗಟ್ಟಿತನ ಹೊಂದಿರಬೇಕು.
ಸ್ನೇಹಿತರೇ, ಸ್ವಾಮಿ ವಿವೇಕಾನಂದರು ಹೇಳಿದಂತೆ “ನಿಮ್ಮ ಬಾಳಿನ ಶಿಲ್ಪಿ ನೀವೇ” ಆದ್ದರಿಂದ ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ವೈಚಾರಿಕತೆಯೂ ನಮ್ಮಲ್ಲಿಯೇ ಇದೆ. ಆದ್ದರಿಂದ ಬರುವ ಕಷ್ಟಗಳಿಗೆ ಬೆನ್ನು ಕೊಡದೇ, ಅವುಗಳನ್ನು ಧೈರ್ಯದಿಂದ ಎದುರಿಸಿ ಸೋಲಿಗೆ ಸವಾಲೆಸೆಯುವ ಕಾರ್ಯ ನಮ್ಮಿಂದಾಗಬೇಕು. ಶಿಲೆಯೊಂದು ಉಳಿಯ ಹೊಡೆತಗಳನ್ನು ಸಹನೆಯಿಂದ ತಿಂದರೆ, ದೇವರ ಮೂರ್ತಿಯಾಗಿ ಗರ್ಭಗುಡಿಯಲ್ಲಿ ಕ್ಷೀರಾಭಿಷೇಕ ಪಡೆಯಬಹುದು, ಒಂದು ವೇಳೆ ಆ ಉಳಿಯ ಪೆಟ್ಟುಗಳಿಗೆ ಹೆದರಿ ಕತ್ತರಿಸಿ ಬಿದ್ದರೆ, ಅದೇ ಶಿಲೆ ಅದೇ ಗರ್ಭಗುಡಿಯ ಮೆಟ್ಟಿಲುಗಳಿಗೂ ಉಪಯೋಗಿಸಲು ಬಾರದಂತಾಗುವುದು ಅಲ್ಲವೇ!?
ಆದ್ದರಿಂದ ಸ್ನೇಹಿತರೇ, ಕಷ್ಟಗಳು ಎಷ್ಟು ಬರುತ್ತವೆಯೋ ಅವುಗಳೆಲ್ಲವೂ ನಮ್ಮನ್ನು ಗಟ್ಟಿಗೊಳಿಸಲೆಂದೇ ಬಂದವುಗಳು ಎಂಬುದನ್ನು ನಾವು ಅರಿಯಬೇಕು. ಮತ್ತು ಅವುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು.
“ಜ್ಞಾನದ ಬಲದಿಂದ ಅಜ್ಞಾನದ ಕೇಡು,
ಸತ್ಯದ ಬಲದಿಂದ ಅಸತ್ಯದ ಕೇಡು,
ಪರುಷದ ಬಲದಿಂದ ಅವಲೋಹದ ಕೇಡು,
ಎನ್ನ ಕೂಡಲಸಂಗನ ಶರಣರ ಅನುಭಾವದಿಂದ ಎನ್ನ ಮನದ ಕೇಡು ನೋಡಯ್ಯ !!
ಎನ್ನುವಂತೆ ನಮ್ಮ ಧೈರ್ಯ, ಸ್ಥೈರ್ಯದ ಬಲದಿಂದ ಸೋಲು, ಅಪಜಯದ ಕೇಡಾಗಬೇಕು.
“ನೀನು ಅತೀ ದಡ್ಡನಿದ್ದೀಯ ನಿನಗೆ ಏನೊಂದು ಬರುವುದಿಲ್ಲ, ನಿನ್ನಂತಹ ಮಕ್ಕಳು ಶಾಲೆ ಬಿಟ್ಟು ಮನೆಯಲ್ಲಿರುವದೇ ಒಳ್ಳೆಯದು” ಎಂದಿದ್ದ ಶಾಲಾ ಶಿಕ್ಷಕಿಯೊಬ್ಬರು ಮುಂದೊಂದು ದಿನ ತಾನು ಯಾರಿಗೆ ಬೈದಿದ್ದರೋ ಅದೇ ವ್ಯಕ್ತಿಯ ವಿಜ್ಞಾನ ಪ್ರಯೋಗಾಲಯದಲ್ಲಿ ದಯವಿಟ್ಟು ತನ್ನ ಮಕ್ಕಳನ್ನು ಸೇರಿಸಿಕೊಳ್ಳಿ ಎಂದು ಅಂಗಲಾಚುವ ಪರಿಸ್ಥಿತಿ ಬಂತು. ಚಿಕ್ಕ ವಯಸ್ಸಿನಲ್ಲಿ ಅಷ್ಟು ದಡ್ಡನಾಗಿದ್ದ ವ್ಯಕ್ತಿ ಬೇರಾರೂ ಅಲ್ಲ, ಜಗತ್ತಿಗೆ ವಿದ್ಯುತ್ ಬಲ್ಲಬನ್ನು ಸಂಶೋಧಿಸಿ ಕೊಟ್ಟು, ಜಗತ್ತನ್ನು ಕತ್ತಲು ಮುಕ್ತವಾಗಿಸಿದ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್.
ನಮ್ಮಲ್ಲಿರುವ ದೌರ್ಬಲ್ಯಗಳನ್ನು, ಕಷ್ಟಗಳನ್ನು ನೆನೆಯುತ್ತಾ ಕುಳಿತುಕೊಳ್ಳದೇ ಆ ಕಷ್ಟಗಳಿಂದ ಹೊರಬರುವತ್ತ ಚಿಂತನೆ ನಡೆಸಬೇಕು. ಸತ್ಯ ಹರಿಶ್ಚಂದ್ರನು ಸತ್ಯಕ್ಕಾಗಿ ಪರಿತಪಿಸಿದಂತೆ, ನಾವುಗಳು ಯಶಸ್ಸಿಗಾಗಿ ಪರಿತಪಿಸುವಂತಾಗಬೇಕು. ಅಂದಾಗ ಮಾತ್ರ ಅವಮಾನ, ಅಪಮಾನಗಳು ನಮ್ಮಿಂದ ದೂರ ಸರಿಯುತ್ತವೆ. ಯಶಸ್ವಿಯಾಗಲು ಅದೆಷ್ಟೇ ಕಷ್ಟಗಳು ಬಂದರೂ ನಮ್ಮ ಗುರಿ ಮುಟ್ಟುವತ್ತ ಮಾತ್ರ ನಮ್ಮ ಗಮನವಿರಲಿ !!!
🌺 ನಿಮ್ಮವ 🙏
⏪ ಶ್ರೀ ಪಿ. ಎಲ್. ಪವಾರ ⏩
No comments:
Post a Comment
If you have any doubts please let me know